ನವದೆಹಲಿ, ನ.15 (DaijiworldNews/AK): ಟೇಕ್-ಆಫ್ ಆದ ಬಳಿಕ ವಿಮಾನದ ಲ್ಯಾಂಡಿಂಗ್ ಗೇರ್ ಸಮಸ್ಯೆಯ ಹಿನ್ನೆಲೆಯಲ್ಲಿ, ಗುವಾಹಟಿಗೆ ಹೊರಟಿದ್ದ ಇಂಡಿಗೋ ವಿಮಾನವು ತುರ್ತು ಪರಿಸ್ಥಿತಿಯಲ್ಲಿ ಪುಣೆ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದ ಘಟನೆ ನಡೆದಿದೆ.

ತಾಂತ್ರಿಕ ದೋಷ ಕಂಡುಬಂದ ತಕ್ಷಣವೇ 6E 0623 (VT-IZE) ಸಂಖ್ಯೆಯ ವಿಮಾನದ ಪೈಲಟ್ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುಣೆ ವಿಮಾನ ನಿಲ್ದಾಣದಲ್ಲಿ ‘ಸಂಪೂರ್ಣ ತುರ್ತು ಪರಿಸ್ಥಿತಿ’ ಘೋಷಿಸಲಾಗಿತ್ತು.
ತುರ್ತು ಶಿಷ್ಟಾಚಾರದ ಭಾಗವಾಗಿ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ದಳಗಳು, ಆ್ಯಂಬುಲೆನ್ಸ್ಗಳು ಮತ್ತು ತುರ್ತು ಸ್ಪಂದನಾ ತಂಡಗಳನ್ನು ತಕ್ಷಣವೇ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಒಟ್ಟು 192 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತಿದ್ದ ಈ ವಿಮಾನವು, ಕೆಳಗಿರುವ ತಾಂತ್ರಿಕ ತಂಡಕ್ಕೆ ಲ್ಯಾಂಡಿಂಗ್ ಗೇರ್ ಸ್ಥಿತಿಯನ್ನು ಪರಿಶೀಲಿಸಲು ಅನುವಾಗುವಂತೆ ರನ್ವೇ ಮೇಲೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿತು.
ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್ ಮತ್ತು ತುರ್ತು ರಕ್ಷಣಾ ಪಡೆಗಳ ಕಟ್ಟೆಚ್ಚರದ ನಡುವೆ ಪೈಲಟ್ ವಿಮಾನವನ್ನು ಅತ್ಯಂತ ಚಾಣಾಕ್ಷತನದಿಂದ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಬಳಿಕ ಏರೋಬ್ರಿಡ್ಜ್ ಮೂಲಕ ಎಲ್ಲಾ 192 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ತುರ್ತು ಲ್ಯಾಂಡಿಂಗ್ ನಂತರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆಯು ಅಗತ್ಯ ನೆರವು ಒದಗಿಸಿದ್ದು, ಅವರನ್ನು ಗುವಾಹಟಿಗೆ ತಲುಪಿಸಲು ಬೆಂಗಳೂರಿನಿಂದ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ. ತಾಂತ್ರಿಕ ದೋಷಕ್ಕೆ ನಿಖರ ಕಾರಣ ತಿಳಿಯಲು ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ.