ಬೆಂಗಳೂರು, ನ.15 (DaijiworldNews/AK): ಕನಕದಾಸರು ತಮ್ಮ ‘ರಾಮಧಾನ್ಯ ಚರಿತೆ’ ಕೃತಿಯ ಮೂಲಕ ರಾಗಿಯ ಶ್ರೇಷ್ಠತೆಯನ್ನು ಪ್ರತಿಪಾದಿಸಿದಂತೆ, ಸಂಗಮೇಶ ಬಾದವಾಡಗಿ ಅವರು ‘ಜೋಳರಾಜನ ಕಥೆ’ ಕೃತಿಯ ಮೂಲಕ ಜೋಳದ ಮಹತ್ವವನ್ನು ಹಾಗೂ ಸಮಾಜದಲ್ಲಿರುವ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆಯ ಪ್ರಶ್ನೆಯನ್ನು ಪರಿಣಾಮಕಾರಿಯಾಗಿ ಮುಂದಿಟ್ಟಿದ್ದಾರೆ. ಇದು ವಿಶಿಷ್ಟವಾದ ಕೃತಿಯಾಗಿದ್ದು, ಇಂತಹ ಸಾಹಿತ್ಯಿಕ ಪ್ರಯತ್ನಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಸಂಗಮೇಶ ಬಾದವಾಡಗಿ ಅವರು ಬರೆದಿರುವ ‘ಜೋಳರಾಜನ ಕಥೆ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕನಕದಾಸರ ‘ರಾಮಧಾನ್ಯ ಚರಿತೆ’ಯ ಆಶಯ ಮತ್ತು ಜೋಳರಾಜನ ಕಥೆಯ ವಿಶಿಷ್ಟತೆಯನ್ನು ವಿವರಿಸಿದರು.
‘ರಾಮಧಾನ್ಯ ಚರಿತೆ’ಯಲ್ಲಿ ಭತ್ತ ಮತ್ತು ರಾಗಿಯ ನಡುವೆ ಯಾವುದು ಶ್ರೇಷ್ಠ ಎಂಬ ಚರ್ಚೆ ನಡೆಯುತ್ತದೆ. ಭತ್ತ ಶ್ರೀಮಂತರ ಆಹಾರವಾಗಿದ್ದರೆ, ರಾಗಿ ಶ್ರಮಿಕ ಜನರ ಆಹಾರವಾಗಿತ್ತು. ಈ ಹಿನ್ನೆಲೆಯಲ್ಲಿ ರಾಗಿಯ ಶ್ರೇಷ್ಠತೆಯನ್ನು ಕನಕದಾಸರು ಪ್ರತಿಪಾದಿಸಿದ್ದರು. ಅದೇ ಕಥೆಯಲ್ಲಿ ಜೋಳವೂ ತನ್ನ ಶ್ರೇಷ್ಠತೆಯನ್ನು ಪ್ರತಿಪಾದಿಸಿ, ಸಾಮಾನ್ಯ ಜನರ ಮತ್ತು ಬಡವರ ಆಹಾರವಾಗಿರುವ ತನ್ನ ಮಹತ್ವವನ್ನು ಗುರುತಿಸಬೇಕು ಎಂದು ವಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಜೋಳರಾಜನ ಕಥೆ ಒಂದು ವಿಶಿಷ್ಟವಾದ ಸಾಹಿತ್ಯಿಕ ಪ್ರಯತ್ನವಾಗಿದೆ ಎಂದು ಹೇಳಿದರು.
ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅವರು, ಹಿಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ರಾಗಿ ಮುದ್ದೆ ಸಾಮಾನ್ಯ ಆಹಾರವಾಗಿತ್ತು. ಹಬ್ಬ, ವಿಶೇಷ ಸಂದರ್ಭಗಳು ಅಥವಾ ನೆಂಟರು ಬಂದಾಗ ಮಾತ್ರ ಅನ್ನ ಮಾಡಲಾಗುತ್ತಿತ್ತು. ಬಡ ಕುಟುಂಬಗಳು ರಾಗಿ ಮತ್ತು ಜೋಳದ ಮುದ್ದೆಯನ್ನೇ ಮುಖ್ಯ ಆಹಾರವಾಗಿ ಸೇವಿಸುತ್ತಿದ್ದವು. ಬಡ ಕುಟುಂಬದ ಮಕ್ಕಳಿಗೆ ಅನಾರೋಗ್ಯವಾದಾಗ ಅನ್ನ ತಿನ್ನಿಸಲು ಪಕ್ಕದ ಮನೆಗಳಿಂದ ಅನ್ನ ಕೇಳಿಕೊಂಡು ಬರುತ್ತಿದ್ದ ಘಟನೆಗಳನ್ನು ತಾವು ಬಾಲ್ಯದಲ್ಲಿ ಕಣ್ಣಾರೆ ಕಂಡಿದ್ದಾಗಿ ಸ್ಮರಿಸಿದರು.
ಈ ಅನುಭವಗಳೇ ಬಡವರಿಗೂ ಅನ್ನ ದೊರೆಯಬೇಕು ಎಂಬ ಆಲೋಚನೆಗೆ ಪ್ರೇರಣೆಯಾದವು. ಬಡವರ ಮನೆಗಳಲ್ಲಿಯೂ ಅನ್ನದ ಊಟ ಇರಬೇಕು ಎಂಬ ಉದ್ದೇಶದಿಂದ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾಗಿ ತಿಳಿಸಿದರು. ಆಹಾರ ಭದ್ರತೆ ಪ್ರತಿಯೊಬ್ಬರ ಹಕ್ಕಾಗಿದ್ದು, ಬಡವರು ಮತ್ತು ಶ್ರೀಮಂತರ ನಡುವೆ ಆಹಾರದ ವಿಚಾರದಲ್ಲಿಯೂ ಅಸಮಾನತೆ ಇರಬಾರದು ಎಂಬುದು ಈ ಯೋಜನೆಯ ಆಶಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕದೊಂದಿಗೆ ತಮ್ಮ ರಾಜಕೀಯ ಮತ್ತು ವೈಯಕ್ತಿಕ ಒಡನಾಟವನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು, 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮರಿಯಪ್ಪ ಮತ್ತು ಮಹಾದೇವಪ್ಪ ಅವರು ಪ್ರೇರಣೆ ನೀಡಿದ್ದರು. ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಕೇವಲ ಹತ್ತು ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾಗಿ ತಿಳಿಸಿದರು.