ಬೆಂಗಳೂರು, ನ.15 (DaijiworldNews/AA): ಸ್ಥಳೀಯ ಪೊಲೀಸ್ ಠಾಣೆಗಳ ವ್ಯಾಪ್ತಿ ಮತ್ತು ನಿಯಂತ್ರಣವನ್ನು ಹೊರತುಪಡಿಸಿ, ನೇರವಾಗಿ ಪೊಲೀಸ್ ಕಮಿಷನರೇಟ್ನ ಪ್ರತ್ಯೇಕ ಕಂಟ್ರೋಲ್ನಲ್ಲಿ ಕಾರ್ಯನಿರ್ವಹಿಸುವ 'ಪ್ರತ್ಯೇಕ ರೌಡಿ ಸ್ಕ್ವಾಡ್' ರಚಿಸಲಾಗುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.

"ಬೆಂಗಳೂರಿನಲ್ಲಿ ರೌಡಿಗಳು ಸ್ಥಳೀಯ ಪೊಲೀಸರ ಜೊತೆ ಹೊಂದಾಣಿಕೆ ಹಾಗೂ ಸಂಪರ್ಕದಲ್ಲಿರುತ್ತಾರೆ ಎಂಬ ಮಾಹಿತಿ ಸರ್ಕಾರಕ್ಕಿದೆ. ದಾಳಿ ನಡೆಯುವ ಮುನ್ನವೇ ರೌಡಿಗಳಿಗೆ ಮಾಹಿತಿ ಕೊಡುವುದು, ರಕ್ಷಣೆ ನೀಡುವುದು ನಡೆಯುತ್ತದೆ. ಹೀಗಾಗಿ ಇಂತಹ ಯಾವುದೇ ಹೊಂದಾಣಿಕೆಗೆ ಅವಕಾಶ ನೀಡದಂತೆ ಪ್ರತ್ಯೇಕ ತಂಡವನ್ನು ರಚಿಸಲಾಗುತ್ತಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
"ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆಗಳು ಮತ್ತು ಡ್ರಗ್ಸ್ ಜಾಲವನ್ನು ಮಟ್ಟಹಾಕಲು ರಚನೆಯಾಗುವ ಈ ಪ್ರತ್ಯೇಕ ರೌಡಿ ಸ್ಕ್ವಾಡ್, ಸ್ಥಳೀಯ ಠಾಣೆಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಮೇಲಿನ ಅಧಿಕಾರಿಗಳ ಕಂಟ್ರೋಲ್ನಲ್ಲಿ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಲಿದೆ" ಎಂದು ಮಾಹಿತಿ ನೀಡಿದರು.
"ಬೆಂಗಳೂರು ನಗರದಲ್ಲಿ ಸಣ್ಣ ಅಪರಾಧ ಘಟನೆಗೂ ಅವಕಾಶ ಕೊಡಬಾರದು. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ನಾವು ಪ್ಲ್ಯಾನ್ ಮಾಡಿದ್ದೇವೆ. ಈಗಾಗಲೇ ಕೆಲವು ಕಡೆ ಡ್ರಗ್ಸ್ ಸೀಜ್ ಮಾಡಿದ್ದೇವೆ, ನಮ್ಮ ಬಳಿ ಸಾಕಷ್ಟು ಮಾಹಿತಿಯಿದ್ದು ಮುಂದೆಯೂ ಕಠಿಣ ಕಾರ್ಯಾಚರಣೆ ಮುಂದುವರಿಯಲಿದೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ" ಎಂದು ತಿಳಿಸಿದರು.