ಬೆಂಗಳೂರು, ನ.15 (DaijiworldNews/AK): ಸಾಮಾನ್ಯ ಪ್ಯಾಸೆಂಜರ್ ರೈಲಿನ ವೇಗ, ನಿಲುಗಡೆ ಮತ್ತು ಸಮಯದಲ್ಲಿ ಯಾವುದೇ ಬದಲಾವಣೆ ಮಾಡದೆ, ಕೇವಲ ಎಕ್ಸ್ಪ್ರೆಸ್ ಸ್ಪೆಷಲ್ ಎಂಬ ಹೆಸರಿಟ್ಟು ಪ್ರಯಾಣಿಕರಿಂದ ಹೆಚ್ಚುವರಿ ಟಿಕೆಟ್ ದರ ವಸೂಲಿ ಮಾಡಿದ್ದ ದಕ್ಷಿಣ ರೈಲ್ವೆ ಹಾಗೂ ರೈಲ್ವೆ ಮಂಡಳಿಗೆ ಗ್ರಾಹಕ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಕಾರವಾರದಿಂದ ಮಂಗಳೂರು ಸೆಂಟ್ರಲ್ಗೆ ಪ್ರಯಾಣಿಸಿದ್ದ ಪ್ರಯಾಣಿಕನೊಬ್ಬರಿಗೆ 65ರೂ.ರ ಬದಲು 125ರೂ. 'ಎಕ್ಸ್ಪ್ರೆಸ್ ದರ' ವಿಧಿಸಿದ್ದಕ್ಕಾಗಿ, ಅವರಿಗೆ ಒಟ್ಟು 5,330ರೂ. ಪಾವತಿಸುವಂತೆ ತಮಿಳುನಾಡಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ಹೊರಡಿಸಿದೆ.
ಆಯೋಗದ ಅಧ್ಯಕ್ಷ ಪಿ. ಗಣೇಶ್ರಾಮ್ ಹಾಗೂ ಸದಸ್ಯರಾದ ಆರ್. ರಮೋಲಾ ಮತ್ತು ಎನ್. ಲಕ್ಷ್ಮಣನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ.
2024ರಲ್ಲಿ ತಾವು ಮೂರು ಬಾರಿ ಕಾರವಾರದಿಂದ ಮಂಗಳೂರು ಸೆಂಟ್ರಲ್ಗೆ ಒಂದೇ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿದ್ದು, ಪ್ರತಿ ಬಾರಿಯೂ ಸಾಮಾನ್ಯ ಪ್ಯಾಸೆಂಜರ್ ದರವಾದ 65 ರ ಬದಲಾಗಿ 125 ಎಕ್ಸ್ಪ್ರೆಸ್ ದರ ವಸೂಲಿ ಮಾಡಲಾಗಿದೆ ಎಂದು ದೂರುದಾರರು ಆಯೋಗದ ಮೊರೆ ಹೋಗಿದ್ದರು.
"ಪ್ರತಿವಾದಿಗಳಾದ ವಾಣಿಜ್ಯ ಗುಮಾಸ್ತರು ಮತ್ತು ದಕ್ಷಿಣ ರೈಲ್ವೆಯು ಸಾಮಾನ್ಯ ಪ್ಯಾಸೆಂಜರ್ ರೈಲಿನ ನಿಲುಗಡೆ, ವೇಗ, ಸಮಯ, ವೈಶಿಷ್ಟ್ಯಗಳು ಮತ್ತು ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡದೆ ಅದನ್ನು ಎಕ್ಸ್ಪ್ರೆಸ್ ಸ್ಪೆಷಲ್ ಹೆಸರಿನಲ್ಲಿ ಓಡಿಸಿ, ದೂರುದಾರರಿಂದ 65ರೂ. ರ ಬದಲು 125ರೂ. ವಸೂಲಿ ಮಾಡಿರುವುದು ಸ್ಪಷ್ಟ ಸೇವಾ ನ್ಯೂನತೆಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ಸೆಪ್ಟೆಂಬರ್ 17ರ ಆದೇಶದಲ್ಲಿ ಆಯೋಗ ಕಟುವಾಗಿ ಟೀಕಿಸಿದೆ.
ದೂರುದಾರರು ಆಯೋಗದ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ವಾದ ಮಂಡಿಸಿದ್ದರು. ಕೋವಿಡ್-19 ಸಾಂಕ್ರಾಮಿಕಕ್ಕೂ ಮುನ್ನ ಈ ರೈಲು ಸಾಮಾನ್ಯ ಪ್ಯಾಸೆಂಜರ್ ರೈಲಾಗಿ ಸಂಚರಿಸುತ್ತಿತ್ತು, ಆದರೆ ಕೋವಿಡ್ ನಂತರ ಇದನ್ನು 'ಎಕ್ಸ್ಪ್ರೆಸ್ ಸ್ಪೆಷಲ್' ಹೆಸರಿನಲ್ಲಿ ಓಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.