ಪುಣೆ, ನ.15 (DaijiworldNews/AK): ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳನ್ನು ಟೀಕಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶಕ್ಕೆ ಮಸಿ ಬಳಿಯುವ ಮೂಲಕ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸುತ್ತಿದ್ದರೆ, ರಾಹುಲ್ ಗಾಂಧಿ ಅವರು ಮೋದಿಯವರನ್ನು ನಿಂದಿಸುತ್ತಲೇ ಇದ್ದಾರೆ. ಆದರೆ ಇದರಿಂದ ಅವರಿಗೆ ಎಂದಿಗೂ ಲಾಭವಾಗುವುದಿಲ್ಲ ಎಂದು ಹೇಳಿದರು.
ನಿಮಗೆ ಅಧಿಕಾರ ಬೇಕಿದ್ದರೆ, ನಿಮ್ಮ ವಿದೇಶ ಪ್ರವಾಸಗಳನ್ನು ನಿಲ್ಲಿಸಿ ಮತ್ತು ಭಾರತದ ಹಳ್ಳಿಗಳಿಗೆ ಭೇಟಿ ನೀಡಲು ಪ್ರಾರಂಭಿಸಿ; ಆಗ ಬಹುಶಃ ಮುಂದೊಂದು ದಿನ ನಿಮ್ಮ ಸರದಿ ಬರಬಹುದು. ನೀವು ಖಂಡಿತವಾಗಿಯೂ ನನ್ನ ಮಾತು ಕೇಳುವುದಿಲ್ಲ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಹೇಳುವುದೇನೆಂದರ ನೀವು ಇದೇ ದಿಕ್ಕಿನಲ್ಲಿ ರಾಹುಲ್ ಗಾಂಧಿಯನ್ನು ಅನುಸರಿಸುತ್ತಾ ಹೋದರೆ, ಮುಂದಿನ 30 ವರ್ಷಗಳವರೆಗೆ ನಿಮ್ಮ ಸರದಿ ಬರುವುದಿಲ್ಲ ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.