ಬೆಂಗಳೂರು, ನ.16 (DaijiworldNews/AA): ಹಿರಿಯೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದು, ಈ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಅಥವಾ ಗೊಂದಲವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾವು ಮತ್ತು ಜೆಡಿಎಸ್ ಎನ್ಡಿಎ ಮೈತ್ರಿಕೂಟದ ಪಾಲುದಾರರು. ಟಿಕೆಟ್ ಕೇಳುವ ಅಧಿಕಾರ ಅವರಿಗೂ ಇದೆ, ನಮಗೂ ಇದೆ. ಈ ಹಿಂದೆ ಬಿಜೆಪಿ ಇಲ್ಲಿ ಗೆದ್ದಿತ್ತು ಹಾಗೂ ಎರಡನೇ ಸ್ಥಾನವನ್ನೂ ಪಡೆದಿತ್ತು. ಜೆಡಿಎಸ್ ಕೂಡ ಹಿಂದೆ ಗೆಲುವು ಸಾಧಿಸಿತ್ತು. ಟಿಕೆಟ್ ವಿಚಾರವಾಗಿ ನಾವು ಯಾವುದೇ ಜಗಳ ಮಾಡುವುದಿಲ್ಲ. ಕಳೆದ 15 ವರ್ಷಗಳ ಮತದಾನದ ಅಂಕಿಅಂಶಗಳು ಮತ್ತು ಸಮೀಕ್ಷೆಗಳನ್ನು ಆಧರಿಸಿ, ಸಮನ್ವಯ ಸಭೆಯಲ್ಲಿ ಚರ್ಚಿಸಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ" ಎಂದರು.
"2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗುವುದು. ಈ ಮೂಲಕ ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗಳಿಗೆ ಸಿದ್ಧತೆ ನಡೆಸಲಾಗುವುದು" ಎಂದು ಹೇಳಿದರು.
ಮುಂದುವರೆದು "ಇದೊಂದು 'ಬೆಲೆ ಏರಿಕೆ ಮತ್ತು ತೆರಿಗೆ ಏರಿಕೆ' ಸರ್ಕಾರ. ರಾಜ್ಯದಲ್ಲಿ ಹಾಲು, ಅಡುಗೆ ಎಣ್ಣೆ, ಬಸ್ ಪ್ರಯಾಣ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ನಾನು ಸಚಿವನಾಗಿದ್ದಾಗ ಬಡವರಿಗೆ ಅನುಕೂಲವಾಗುವಂತೆ ಪ್ರತಿ ವರ್ಷ ಆಸ್ತಿ ಮಾರ್ಗಸೂಚಿ ದರವನ್ನು (ಗೈಡ್ಲೈನ್ಸ್ ವ್ಯಾಲ್ಯೂ) ಕಡಿಮೆ ಮಾಡಿದ್ದೆ. ಆದರೆ ಈ ಸರ್ಕಾರ ಪ್ರತಿ ವರ್ಷ ದರ ಏರಿಕೆ ಮಾಡುತ್ತಿದ್ದು, ರಾಜ್ಯದಲ್ಲಿ ಜನರು ಸ್ವಂತ ಮನೆ ಕಟ್ಟಿ ವಾಸಿಸುವುದೇ ಅಪರಾಧ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಆದಾಯವೆಲ್ಲ ತೆರಿಗೆ ಪಾವತಿಗೇ ಹೋಗುತ್ತಿದೆ. ಮೂರು ವರ್ಷಗಳಲ್ಲಿ ಜನರಿಗೆ ತೊಂದರೆ ಕೊಟ್ಟಿದ್ದೇ ಈ ಸರ್ಕಾರದ ಸಾಧನೆಯಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.