ಬೆಂಗಳೂರು, ನ.16 (DaijiworldNews/TA): ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಪ್ರತಿಯೊಬ್ಬರ ಫೋನ್ಗಳೂ ಕದ್ದಾಲಿಕೆಯಾಗುತ್ತಿವೆ. ಗೃಹ ಸಚಿವನಾಗಿರುವ ತನ್ನ ಫೋನ್ ಕೂಡ ಕದ್ದಾಲಿಕೆಯಾಗುತ್ತಿದೆ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಫೋನ್ ಕದ್ದಾಲಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೆಗಾಸಸ್ ಸ್ಪೈವೇರ್ ಖರೀದಿ ಮತ್ತು ಅದರ ಬಳಕೆಯ ಬಗ್ಗೆಯೂ ಪ್ರಶ್ನಿಸಿರುವ ಅವರು, ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕಲು ಮತ್ತು ನಿಯಂತ್ರಿಸಲು ಇಂತಹ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನು ಅವರು 'ಗುಜರಾತ್ ಮಾದರಿ' ಎಂದು ಟೀಕಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ನಿರುದ್ಯೋಗ, ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಸಂಬಂಧ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಬದಲು ವಿರೋಧ ಪಕ್ಷಗಳನ್ನು ಹೆದರಿಸುವ ಮತ್ತು ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ. ಗೃಹ ಸಚಿವರ ಫೋನ್ ಕೂಡ ಕದ್ದಾಲಿಕೆಯಾಗುತ್ತಿದೆ ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.