ಮೈಸೂರು, ನ.16 (DaijiworldNews/AA): ರಾಜ್ಯದಲ್ಲಿ ಪೆಟ್ರೋಲ್ಗೆ ಎಥೆನಾಲ್ ಮಿಶ್ರಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾಳೆ ಅಧಿಕೃತ ವರದಿ ಸಲ್ಲಿಸುತ್ತೇನೆ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ 6 ಪೆಟ್ರೋಲಿಯಂ ಟರ್ಮಿನಲ್ಗಳಲ್ಲಿ ಎಥೆನಾಲ್ ಹೆಚ್ಚಿನ ಮಿಶ್ರಣ ಆಗುತ್ತದೆ. ಇದರ ತಾಂತ್ರಿಕ ವರದಿ ಪ್ರಯೋಗಾಲಯ ವರದಿ ಎಲ್ಲವನ್ನೂ ಸೇರಿಸಿ ವರದಿ ಕೊಡುತ್ತೇನೆ. ನಮ್ಮ ಸರ್ಕಾರದ ವರದಿ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ನಾವು ನಮ್ಮ ವ್ಯಾಪ್ತಿಯಲ್ಲೇ ಕ್ರಮ ಕೈಗೊಳ್ಳುತ್ತೇವೆ. ಇದು ಪೆಟ್ರೋಲ್ ಬಂಕ್ನವರ ಸಮಸ್ಯೆಯಲ್ಲ. ಪೆಟ್ರೋಲ್ ಬಂಕ್ನವರು ಎಥನಾಲ್ ಮಿಶ್ರಣ ಮಾಡಲು ಬರುವುದಿಲ್ಲ. ಇದು ಪೆಟ್ರೋಲ್ ಬಂಕ್ಗೆ ಬರುವ ಪೆಟ್ರೋಲ್ ಟರ್ಮಿನಲ್ಗಳ ಸಮಸ್ಯೆ. ಅಧಿಕ ಎಥೆನಾಲ್ ಮಿಶ್ರಣದಿಂದ ಜನಸಾಮಾನ್ಯರಿಗೆ ಮಾತ್ರ ಅಲ್ಲ ಪೆಟ್ರೋಲ್ ಬಂಕ್ಗೆ ಸಮಸ್ಯೆಯಾಗುತ್ತಿದೆ. ಇದನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದರು.
ದರ ಏರಿಕೆ ಕುರಿತು ಮಾತನಾಡಿದ ಅವರು, "ಬೆಲೆ ಏರಿಕೆಗೂ ಹಾಲಿನ ದರ ಏರಿಕೆಗೂ ಸಂಬಂಧವಿಲ್ಲ. ಹಾಲು, ಬಸ್ ದರ ಏರಿಕೆಗಿಂತ ಒಂದು ತಿಂಗಳ ಮುಂಚೆಯೇ ನಾನು ಇದರ ಎಲ್ಲ ವರದಿಗಳನ್ನ ತರಿಸಿಕೊಂಡಿದ್ದೇನೆ. ಎಲ್ಲ ವರದಿಯ ಸತ್ಯ ಗೊತ್ತಾದ ಮೇಲೆ ಅದನ್ನ ಬಹಿರಂಗ ಮಾಡಿದ್ದೇನೆ" ಎಂದು ತಿಳಿಸಿದರು.
"ಇ-ಕೆವೈಸಿಗೆ ಅನ್ನ ಸೇವೆ ಆ್ಯಪ್ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದರಿಂದ ಲಕ್ಷಾಂತರ ಜನರಿಗೆ ಅನುಕೂಲ ಆಗಿದೆ. ಬಹಳ ಮುಖ್ಯವಾಗಿ ಕೆಲಸ ನಿಮಿತ್ತ ಊರು ಬಿಟ್ಟವರಿಗೆ ಇದರ ಅನುಕೂಲ ಆಗುತ್ತಿದೆ. ಮೊದಲು ಆ್ಯಪ್ನ ವ್ಯಾಪ್ತಿ ರಾಜ್ಯಕ್ಕೆ ಇತ್ತು. ಈಗ ಅದನ್ನ ದೇಶ ವ್ಯಾಪ್ತಿಗೆ ವಿಸ್ತರಿಸಿದ್ದೇವೆ. ಇದರಿಂದ ಹೊರ ರಾಜ್ಯಗಳಿಗೆ ಹೋಗಿರುವ ಕಾರ್ಮಿಕರಿಗೆ ಅನುಕೂಲ ಆಗುತ್ತಿದೆ. ಇ-ಕೆವೈಸಿಗೆ ಕೆಲವು ಅಂಗಡಿಗಳಲ್ಲಿ ಹಣ ಕೇಳಿರುವುದು ಸತ್ಯ. ಹಣ ಕೇಳಿದ ಸುಮಾರು 12 ಅಂಗಡಿಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಎಲ್ಲವೂ ಕೂಡ ಲೋಪ ಆಗದ ರೀತಿ ನೋಡಿಕೊಳ್ಳುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.
"ಬರದಿಂದ ಅಕ್ಕಿ ದಾಸ್ತಾನಿನ ಮೇಲೆ ಪರಿಣಾಮ ಬೀರಿದೆ. ಬರದಿಂದ ಭತ್ತದ ಬೆಳೆ ಕುಂಠಿತವಾಗಿದೆ. ಇದನ್ನ ಬಳಸಿಕೊಂಡು ಅನ್ನಭಾಗ್ಯ ಅಕ್ಕಿಗೆ ಕೈ ಹಾಕಿದರೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಬರಿ ಅಕ್ಕಿ ಮಾತ್ರ ಅಲ್ಲ ಅಕ್ಕಿ ತೆಗೆದುಕೊಂಡು ಹೋಗುವ ಟ್ರಕ್ಗಳನ್ನ ಸೀಜ್ ಮಾಡಿದ್ದೇವೆ. ಇಲಾಖೆಯಲ್ಲಿ ಈವರೆಗೆ ಆಗದ ಅಕ್ಕಿ ಈಗ ಸೀಜ್ ಆಗಿದೆ. ಕಂಡು ಕೇಳರಿಯದಷ್ಟು ಅಕ್ಕಿ ರೈಡ್ ಆಗಿದೆ. ಇದೆಲ್ಲ ಅನ್ನಭಾಗ್ಯದ ಅಕ್ಕಿ. ಕಾಳಸಂತೆಯಲ್ಲಿ ಅಕ್ಕಿ ದಾಸ್ತಾನು ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ. ಅಕ್ಕಿಯನ್ನು ಇಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಿದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ" ಎಂದು ನುಡಿದರು.