ಬೆಂಗಳೂರು,, ನ.16 (DaijiworldNews/AK): ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ರಾಜ್ಯಾದ್ಯಂತ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು ನಾಳೆಯಿಂದ (ನವೆಂಬರ್ 17) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ.
ಕಳೆದ 18 ವರ್ಷಗಳಿಗೂ ಹೆಚ್ಚು ಕಾಲ ಆಶಾ ಕಾರ್ಯಕರ್ತೆಯರು ತಳಮಟ್ಟದಲ್ಲಿ ಅತ್ಯಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ಕ್ಷೇತ್ರಕಾರ್ಯ ನಿರ್ವಹಿಸುವುದರ ಜೊತೆಗೆ, ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತಾರೆ.
ಇಷ್ಟೆಲ್ಲಾ ಶ್ರಮವಹಿಸಿದರೂ ಆಶಾ ಕಾರ್ಯಕರ್ತೆಯರ ವೇತನವು ಈಗಲೂ ಬಹುತೇಕ ಪ್ರೋತ್ಸಾಹಧನ ಆಧಾರಿತವಾಗಿಯೇ ಮುಂದುವರಿದಿದೆ. ಇದರಿಂದ ಕಾರ್ಯಕರ್ತೆಯರು ತೀವ್ರ ಆರ್ಥಿಕ ಅಭದ್ರತೆ ಎದುರಿಸುತ್ತಿದ್ದಾರೆ. ದೇಶದ ಇತರೆ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ನಿಶ್ಚಿತ ಗೌರವಧನ ನೀಡಲಾಗುತ್ತಿದ್ದು, ಕರ್ನಾಟಕದಲ್ಲೂ ಅದೇ ಮಾದರಿ ಅನುಸರಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಪ್ರಮುಖ ಬೇಡಿಕೆ:
- ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ, ನಿಶ್ಚಿತ ಗೌರವಧನವನ್ನು ನಿಗದಿಪಡಿಸಬೇಕು.
- ಆನ್ಲೈನ್ ವರದಿ ಹಾಗೂ ದತ್ತಾಂಶ ದಾಖಲಾತಿಗಾಗಿ ಉತ್ತಮ ಗುಣಮಟ್ಟದ ಮೊಬೈಲ್ ಫೋನ್ಗಳನ್ನು ವಿತರಿಸಬೇಕು ಮತ್ತು ಮಾಸಿಕ ರೀಚಾರ್ಜ್ ಭತ್ಯೆ ನೀಡಬೇಕು.
- ಆಶಾ ಕಾರ್ಯಕರ್ತೆಯರಿಗೆ 6 ತಿಂಗಳ ವೇತನ ಸಹಿತ ಹೆರಿಗೆ ರಜೆ ಸೌಲಭ್ಯವನ್ನು ಜಾರಿಗೊಳಿಸಬೇಕು.
- ಆರೋಗ್ಯ ಇಲಾಖೆಗೆ ಸಂಬಂಧಪಡದ ಇತರೆ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸುವುದನ್ನು ತಕ್ಷಣವೇ ನಿಲ್ಲಿಸಬೇಕು.
- 2025ರ ಫೆಬ್ರವರಿ 25ರಿಂದ ಸೇವೆಯಿಂದ ಹಿಂಪಡೆಯಲಾಗಿರುವ ಆಶಾ ಸುಗಮಕಾರರನ್ನು ಸೂಕ್ತ ಸಂಭಾವನೆಯೊಂದಿಗೆ ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು.
- 2024–25ನೇ ಸಾಲಿನ ಹೆಚ್ಚುವರಿ ಮಾಸಿಕ ಪ್ರೋತ್ಸಾಹಧನವಾದ ₹1,500 ಸೇರಿದಂತೆ ಬಾಕಿ ಉಳಿದಿರುವ ಎಲ್ಲಾ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.