ಮೈಸೂರು, ನ.16 (DaijiworldNews/TA): ಸಾಂಸ್ಕೃತಿಕ ನಗರಿ ಮೈಸೂರಿನ ಪತ್ರಿಕಾ ಹಾಗೂ ವನ್ಯಜೀವಿ ಛಾಯಾಗ್ರಾಹಕ ಮಧುಸೂಧನ ಎಸ್.ಆರ್. ಅವರ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿ ದೊಡ್ಡ ಮೋರಿಯೊಳಗೆ ಅಡಗಿಕೊಂಡಿದ್ದ ಚಿರತೆಯ ರಕ್ಷಣಾ ಕಾರ್ಯಾಚರಣೆಯನ್ನು ಸೆರೆಹಿಡಿದಿದ್ದ ಅವರ ಛಾಯಾಚಿತ್ರಕ್ಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.

ಮಹಾರಾಷ್ಟ್ರದ ಪುಣೆಯ GENCF ಫೌಂಡೇಶನ್ ಆಯೋಜಿಸಿದ್ದ 'ಎ ಗ್ಲೋಬಲ್ ನೇಚರ್ ಅಂಡ್ ವೈಲ್ಡ್ಲೈಫ್ ಫೋಟೋಗ್ರಫಿ ಅವಾರ್ಡ್-2026' ಸ್ಪರ್ಧೆಯಲ್ಲಿ ಮಧುಸೂಧನ್ ಅವರು 'GENCF ಪ್ರಕೃತಿಯ ರಾಯಭಾರಿ ಪ್ರಶಸ್ತಿ–2026' ಪಡೆದುಕೊಂಡಿದ್ದಾರೆ. ದೇಶದ ವಿವಿಧ ಭಾಗಗಳಿಂದ 500ಕ್ಕೂ ಅಧಿಕ ಛಾಯಾಗ್ರಾಹಕರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ 2,000ಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗಿಳಿದಿದ್ದವು. ಈ ಪೈಕಿ ಮಧುಸೂಧನ್ ಅವರ 'Leopard in City' ಎಂಬ ಛಾಯಾಚಿತ್ರವು ವನ್ಯಜೀವಿ ಸಂರಕ್ಷಣೆ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಮೈಸೂರಿನ ಉದಯಗಿರಿ ಬಡಾವಣೆಯ ದೊಡ್ಡ ಮೋರಿಯೊಂದರಲ್ಲಿ ಚಿರತೆ ಅಡಗಿಕೊಂಡಿದ್ದ ಸಂದರ್ಭದಲ್ಲಿ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಚಿರತೆ ರಕ್ಷಣಾ ಕಾರ್ಯಾಚರಣೆಯನ್ನು ಮಧುಸೂಧನ್ ಅವರು ತಮ್ಮ ಕ್ಯಾಮೆರಾದಲ್ಲಿ ಅತ್ಯಂತ ನೈಜವಾಗಿ ಸೆರೆಹಿಡಿದಿದ್ದರು. ನಗರೀಕರಣದ ಪರಿಣಾಮ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವ ಸವಾಲು ಹಾಗೂ ಅವುಗಳನ್ನು ಸುರಕ್ಷಿತವಾಗಿ ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ನಡೆಸುವ ಸಾಹಸವನ್ನು ಈ ಛಾಯಾಚಿತ್ರ ಪರಿಣಾಮಕಾರಿಯಾಗಿ ಬಿಂಬಿಸಿದೆ.
ಈ ತಿಂಗಳ ಕೊನೆಯ ವಾರದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ಛಾಯಾಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಧುಸೂಧನ್ ಅವರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ. ಇದಲ್ಲದೆ, GENCF ಫೌಂಡೇಶನ್ ಪ್ರಕಟಿಸಲಿರುವ 2026ರ ವಾರ್ಷಿಕ ಸಂಚಿಕೆಯಲ್ಲೂ ಪ್ರಶಸ್ತಿ ವಿಜೇತ 'Leopard in City' ಛಾಯಾಚಿತ್ರ ಪ್ರಕಟವಾಗಲಿದೆ.
ಮೈಸೂರಿನ ಚಿರತೆ ರಕ್ಷಣಾ ಕಾರ್ಯಾಚರಣೆಯ ಅಪರೂಪದ ಕ್ಷಣವೊಂದು ಛಾಯಾಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಮೈಸೂರಿನ ಛಾಯಾಗ್ರಹಣ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಮಧುಸೂಧನ್ ಅವರ ಸಾಧನೆಗೆ ಛಾಯಾಗ್ರಹಣ ವಲಯ ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿವೆ.