ನವದೆಹಲಿ, ನ.16 (DaijiworldNews/AA): ಭಾರತದ ಸೇನಾ ಪಡೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಬಲೆಗೆ ಹಾಕಿಕೊಳ್ಳಲು ಹನಿಟ್ರ್ಯಾಪ್ ಇತ್ಯಾದಿ ಹಲವು ವಿಧಾನಗಳನ್ನು ಶತ್ರುಗಳು ಅನುಸರಿಸುತ್ತಾರೆ. ಸೈಬರ್ ದಾಳಿಯಿಂದ ಭಾರತದ ಮಿಲಿಟರಿ ಇನ್ಫ್ರಾಸ್ಟ್ರಕ್ಚರ್ ಸುರಕ್ಷಿತವಾಗಿದೆ. ಆದರೆ, ಶತ್ರುಗಳು ಮಿಲಿಟರಿ ಕ್ಷೇತ್ರದಲ್ಲಿ ವ್ಯಕ್ತಿಗಳನ್ನು ಗುರಿ ಮಾಡುತ್ತಾರೆ. ಇದನ್ನು ನಿಯಂತ್ರಿಸುವ ವ್ಯವಸ್ಥೆಯೂ ನಮ್ಮಲ್ಲಿದೆ ಎಂದು ವಾಯುಪಡೆ ಮುಖ್ಯಸ್ಥರಾದ ಮಾರ್ಷಲ್ ಆಶುತೋಷ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಎಎನ್ಐ ನ್ಯಾಷನಲ್ ಸೆಕ್ಯೂರಿಟಿ ಸಮಿಟ್ 3.0 ಸಮಾವೇಶದಲ್ಲಿ ಈ ಬಗ್ಗೆ ಮಾತನಾಡಿದ ಅವರು, "ನಮ್ಮ ಮಿಲಿಟರಿ ಕಮ್ಯೂನಿಕೇಶನ್ ನೆಟ್ವರ್ಕ್ ಸಾರ್ವಜನಿಕ ಇಂಟರ್ನೆಟ್ ವ್ಯವಸ್ಥೆಗೆ ಜೋಡಿತಗೊಂಡಿಲ್ಲ. ಅಲ್ಲಿ ಸೈಬರ್ ದಾಳಿ ಮಾಡಿ ಭೇದಿಸಲು ಆಗುವುದಿಲ್ಲ. ಹೀಗಾಗಿ, ವಿದೇಶೀ ಗುಪ್ತಚಾರರು ಹಾರ್ಡ್ವೇರ್ ಬದಲು ವ್ಯಕ್ತಿಗಳನ್ನು ಗುರಿ ಮಾಡುತ್ತಾರೆ. ಇದಕ್ಕಾಗಿ ಕೆಲ ತಾಂತ್ರಿಕ ಪರಿಹಾರಗಳು ಮತ್ತು ಸಾಂಸ್ಥಿಕ ಪರಿಹಾರಗಳ ವ್ಯವಸ್ಥೆ ನಮ್ಮಲ್ಲಿದೆ" ಎಂದು ತಿಳಿಸಿದರು.
"ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಖಾಸಗಿ ಡಿಫೆನ್ಸ್ ಸೆಕ್ಟರ್ನಲ್ಲಿ ಕೆಲಸ ಮಾಡುವವರನ್ನು ಗೂಢಚಾರರ ಜಾಲ ಗುರಿ ಮಾಡುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ, ಪ್ರೈವೇಟ್ ಸೆಕ್ಟರ್ ಜನರಿಗೆ ನೆಟ್ವರ್ಕ್ ಹೇಗೆ ಬಳಸಬೇಕು ಎಂದು ತಿಳಿಸಲಾಗುತ್ತದೆ. ಅದನ್ನು ಸರಿಯಾಗಿ ಪಾಲಿಸಿದರೆ ಪ್ರಮುಖ ಮಾಹಿತಿ ಸುರಕ್ಷಿತವಾಗಿರುತ್ತದೆ" ಎಂದು ಹೇಳಿದರು.
"ಸರ್ಕಾರಿ ಮತ್ತು ಖಾಸಗಿ ಡಿಫೆನ್ಸ್ ಸೆಕ್ಟರ್ನ ಆಯಕಟ್ಟಿನ ಸ್ಥಳದಲ್ಲಿರುವ ವ್ಯಕ್ತಿಗಳನ್ನು ಗುರಿ ಮಾಡುವ ಗುಪ್ತಚರ ಜಾಲದಲ್ಲಿ ಹನಿಟ್ರ್ಯಾಪ್ ಒಂದು ಸಣ್ಣ ಭಾಗ ಮಾತ್ರ. ಈಗೀಗ ರಹಸ್ಯ ಮಾಹಿತಿಯನ್ನು ಪಡೆಯಲು ಸೈಬರ್, ಹನಿಟ್ರ್ಯಾಪ್ ಮತ್ತಿತರ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ" ಎಂದರು.
"ಮಿಲಿಟರಿ ಕ್ಷೇತ್ರದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಸೋಗಿನಲ್ಲಿ ಸಂಪರ್ಕಿಸಬಹುದು, ಸಾಲ ನೀಡಿ ಬಲೆಗೆ ಬೀಳಿಸಬಹುದು. ಈ ಎಲ್ಲದರ ಬಗ್ಗೆ ನಮಗೆ ಗೊತ್ತಿದೆ. ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇವೆ. ಹಾಗೆಯೇ, ಇದನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.