ಬೆಂಗಳೂರು, ನ.16 (DaijiworldNews/AK): ಬೆಂಗಳೂರಿನಲ್ಲಿ ಸಂಚರಿಸುವ ಓಲಾ, ಉಬರ್, ನಮ್ಮ ಯಾತ್ರಿ ಕ್ಯಾಬ್ಗಳಿಗೂ ಇನ್ಮುಂದೆ ಮೀಟರ್ ಕಡ್ಡಾಯವಾಗಲಿದೆ. ಮೀಟರ್ ಅಳವಡಿಸದೆ ಕ್ಯಾಬ್ ಅಥವಾ ಆಟೋ ಓಡಿಸುವಂತಿಲ್ಲ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಸಾರಿಗೆ ಸಚಿವ ಭೈರತಿ ಸುರೇಶ್ ಮಾತನಾಡಿ, ಆಟೋಗಳಂತೆ ಓಲಾ, ಉಬರ್ ಹಾಗೂ ನಮ್ಮ ಯಾತ್ರಿ ಕ್ಯಾಬ್ಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಕ್ಯಾಬ್ಗಳಿಗೂ ಈ ನಿಯಮ ಅನ್ವಯವಾಗಲಿದೆ. ವಿಯೆಟ್ನಾಂ ಮೂಲದ ಗ್ರೀನ್ ಎಸ್ಎಂ ಕಂಪನಿಯ ಕ್ಯಾಬ್ಗಳಿಗೂ ಮೀಟರ್ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮೀಟರ್ ಅಳವಡಿಕೆ ಸಂಬಂಧ ಕರಡು ನಿಯಮ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೀಟರ್ ಇಲ್ಲದೆ ಆಟೋ ಅಥವಾ ಕ್ಯಾಬ್ ಓಡಿಸಿದರೆ ದಂಡ ವಿಧಿಸಲಾಗುತ್ತದೆ. ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೊಸ ನಿಯಮದ ಪ್ರಕಾರ, ಮೊದಲ ಬಾರಿಗೆ ಫುಟ್ಪಾತ್ ಮೇಲೆ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ 5,000 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ ವಿಧಿಸಲು ಉದ್ದೇಶಿಸಲಾಗಿದೆ. ಮೂರನೇ ಅಥವಾ ನಾಲ್ಕನೇ ಬಾರಿಯೂ ಇದೇ ತಪ್ಪು ಮಾಡಿದರೆ ವಾಹನವನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ.
ಅಲ್ಲದೇ ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವುದಕ್ಕೂ ನಿಷೇಧ ಹೇರಲು ಸರ್ಕಾರ ನಿರ್ಧರಿಸಿದೆ. ಹಾಫ್ ಹೆಲ್ಮೆಟ್ಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ಜತೆಗೆ ಅವುಗಳ ತಯಾರಿಕಾ ಕೇಂದ್ರಗಳನ್ನೂ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಈ ಸಂಬಂಧ ಕಾಯ್ದೆ ಜಾರಿಗೆ ತರಲು ಅಗತ್ಯವಿರುವ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಪೂರ್ಣಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಹೊಸ ವರ್ಷದಿಂದಲೇ ಈ ನಿಯಮಗಳನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಹೀಗಾಗಿ, ಕ್ಯಾಬ್ ಮತ್ತು ಆಟೋ ಚಾಲಕರು ಮಾತ್ರವಲ್ಲದೆ ದ್ವಿಚಕ್ರ ವಾಹನ ಸವಾರರೂ ಹೊಸ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ.