ನವದೆಹಲಿ, ನ.16 (DaijiworldNews/TA): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕತೆ ‘Belonging: A Journey of Love’ ಇಂದು ಸಂಜೆ 6.30ಕ್ಕೆ ನವದೆಹಲಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ತಮ್ಮ ಜೀವನದ ವೈಯಕ್ತಿಕ, ಭಾವನಾತ್ಮಕ ಹಾಗೂ ಮಹತ್ವದ ಘಟನೆಗಳನ್ನು ಈ ಕೃತಿಯಲ್ಲಿ ಸೋನಿಯಾ ಗಾಂಧಿ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕವು ನವೆಂಬರ್ 10ರಂದೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದರೂ, ಇಂದು ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್ನಲ್ಲಿ ಅಧಿಕೃತ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಅವರ ಆಪ್ತರು ಹಾಗೂ ಪ್ರಕಾಶನ ವಲಯದ ಗಣ್ಯರನ್ನು ಆಹ್ವಾನಿಸಲಾಗಿದೆ.
ಇಟಲಿಯ ಪುಟ್ಟ ಪಟ್ಟಣವಾದ ಲೂಸಿಯಾನಾದಲ್ಲಿ ಜನಿಸಿದ ಸೋನಿಯಾ ಗಾಂಧಿ ಅವರ ಬದುಕಿನ ಪಯಣವನ್ನು ಈ ಪುಸ್ತಕ ವಿವರಿಸುತ್ತದೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭದಿಂದ ಹಿಡಿದು, ಅವರೊಂದಿಗಿನ ಪ್ರೇಮ, ವಿವಾಹ ಹಾಗೂ ಭಾರತಕ್ಕೆ ಆಗಮನದ ಅನುಭವಗಳನ್ನು ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ವಿವಾಹದ ಬಳಿಕ ಭಾರತದ ಸಂಸ್ಕೃತಿ, ಭಾಷೆ ಮತ್ತು ಜನಜೀವನದೊಂದಿಗೆ ಬೆರೆತ ತಮ್ಮ ಅನುಭವಗಳನ್ನೂ ಅವರು ವಿವರಿಸಿದ್ದಾರೆ. ಗಾಂಧಿ ಕುಟುಂಬದ ಸೊಸೆಯಾಗಿ ಅತ್ತೆ ಇಂದಿರಾ ಗಾಂಧಿ ಅವರೊಂದಿಗಿನ ಒಡನಾಟ, ಕುಟುಂಬದೊಳಗಿನ ಆತ್ಮೀಯ ಕ್ಷಣಗಳು ಹಾಗೂ ರಾಜೀವ್ ಗಾಂಧಿ ಅವರೊಂದಿಗಿನ ದಾಂಪತ್ಯ ಜೀವನದ ನೆನಪುಗಳು ಪುಸ್ತಕದ ಪ್ರಮುಖ ಆಕರ್ಷಣೆಗಳಾಗಿವೆ.
ಸೋನಿಯಾ ಗಾಂಧಿ ಅವರ ಬದುಕಿನಲ್ಲಿ ಎದುರಾದ ಅತ್ಯಂತ ಕಠಿಣ ಘಟ್ಟಗಳ ಬಗ್ಗೆಯೂ ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ. ಅತ್ತೆ ಇಂದಿರಾ ಗಾಂಧಿ ಅವರ ಹತ್ಯೆ ಹಾಗೂ ಪತಿ ರಾಜೀವ್ ಗಾಂಧಿ ಅವರ ಹತ್ಯೆಯಂತಹ ಘೋರ ದುರಂತಗಳನ್ನು ಅವರು ಹೇಗೆ ಎದುರಿಸಿದರು ಎಂಬುದನ್ನು ತಮ್ಮದೇ ಅನುಭವಗಳ ಮೂಲಕ ವಿವರಿಸಿದ್ದಾರೆ. ಪ್ರೀತಿ, ಕುಟುಂಬ, ನಷ್ಟ, ನೋವು ಮತ್ತು ಹೊಸ ಪರಿಸರದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಸವಾಲುಗಳ ಸುತ್ತ ಹೆಣೆದಿರುವ ಈ ಆತ್ಮಕತೆ, ಸೋನಿಯಾ ಗಾಂಧಿ ಅವರ ಸಾರ್ವಜನಿಕ ಬದುಕಿನಾಚೆಗಿನ ವೈಯಕ್ತಿಕ ವ್ಯಕ್ತಿತ್ವವನ್ನು ಪರಿಚಯಿಸುವ ನಿರೀಕ್ಷೆಯಿದೆ.