ಚಾಮರಾಜನಗರ, ನ.16 (DaijiworldNews/TA): ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ-ಸುಲ್ತಾನ್ ಬತ್ತೇರಿ ಮಾರ್ಗದಲ್ಲಿ ಕಾಡಾನೆಯೊಂದು ವಾಹನಗಳ ಮೇಲೆ ದಾಳಿ ಮಾಡಲು ಮುಂದಾದ ಘಟನೆ ನಡೆದಿದೆ. ಈ ವೇಳೆ ಬೈಕ್ನಲ್ಲಿ ಸಂಚರಿಸುತ್ತಿದ್ದ ಸವಾರನೊಬ್ಬ ಕಾಡಾನೆಯ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ರಸ್ತೆಯಲ್ಲೇ ನಿಂತಿದ್ದ ಕಾಡಾನೆಯನ್ನು ಕೆಲವು ಪ್ರವಾಸಿಗರು ಕೆಣಕಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಒಂಟಿ ಸಲಗ ಏಕಾಏಕಿ ವಾಹನಗಳತ್ತ ನುಗ್ಗಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರನತ್ತಲೂ ಆನೆ ಧಾವಿಸಿದ್ದು, ಸವಾರ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರಾಗಿದ್ದಾನೆ. ಕಾಡುಪ್ರಾಣಿಗಳ ಸಂಚಾರವಿರುವ ಮಾರ್ಗದಲ್ಲಿ ಪ್ರವಾಸಿಗರು ಇಂತಹ ಬೇಜವಾಬ್ದಾರಿ ವರ್ತನೆ ತೋರುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳ ಸಮೀಪ ಹೋಗುವುದು, ಅವುಗಳನ್ನು ಕೆಣಕುವುದು ಅಥವಾ ವಾಹನಗಳಿಂದ ಕಿರಿಕಿರಿ ಉಂಟುಮಾಡುವುದು ಅಪಾಯಕಾರಿ ಎಂಬ ಎಚ್ಚರಿಕೆಗಳೂ ಕೇಳಿಬಂದಿವೆ. ಆನೆ ವಾಹನಗಳತ್ತ ದಾಳಿ ಮಾಡಲು ಮುಂದಾದ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.