ಗದಗ, ಜ 05 (Daijiworld News/MB) : "ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಕಾಂಗ್ರೆಸ್ ತನ್ನ ಮತ ಬ್ಯಾಂಕಿಗಾಗಿ ಅಲ್ಪಸಂಖ್ಯಾತರು, ದೀನದಲಿತರು ಸೇರಿದಂತೆ ಕೆಲ ಸಮುದಾಯಗಳಿಗೆ ತಪ್ಪು ಮಾಹಿತಿ ನೀಡಿ ಅವರು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ" ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಗದಗದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ದೇಶದ 130 ಕೋಟಿ ಜನರಲ್ಲಿ ಯಾರಿಗೂ ಈ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಅನ್ಯಾಯವಾಗುವುದಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಜನರಿಗೆ ಪ್ರಚೋಧನೆ ನೀಡುವುದನ್ನು ನಿಲ್ಲಿಸಬೇಕು" ಎಂದು ಹೇಳಿದರು.
ಹಾಗೆಯೇ "ಮಹಾದಾಯಿ ವಿಚಾರದಲ್ಲಿ ಗಡಿಬಿಡಿ ಮಾಡಬಾರದು. ವಿವಾದ ನ್ಯಾಯಾಲಯದ ಮುಂದೆ ಇದ್ದು ಯಾರೂ ಅವಸರ ಮಾಡಬಾರದು. ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಲು ಅನುವು ಮಾಡಿ ಕೊಡುವುದಿಲ್ಲ" ಎಂದು ಸ್ಷಪ್ಷಪಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ತಿಳಿಸಿದರು.