ಹಾಸನ, ಜ.05 (Daijiworld News/PY) : "ಮುಂದಿನ ಬಜೆಟ್ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ."
ಹಾಸನದ ಹಳೆಬೀಡಿನ ಪುಷ್ಪಗಿರಿ ಉತ್ಸವಕ್ಕೆ ಆಗಮಿಸಿದ ವೇಳೆ ಮಾರಗೊಂಡನಹಳ್ಳಿಯ ಹೆಲಿಪ್ಯಾಡ್ನಲ್ಲಿ ಮಾತನಾಡಿದ ಅವರು, "ಈಗಾಗಲೇ ಮುಂದಿನ ಸಾಲಿನ ಬಜೆಟ್ಗೆ ಸಿದ್ಧತೆ ನಡೆಯುತ್ತಿದ್ದು, ರೈತರ ಹಿತಕಾಪಾಡುವ ಉದ್ದೇಶದಿಂದ ನೀರಾವರಿ ಯೋಜನೆಗಳಿಗೆ ಜಾಸ್ತಿ ಮಹತ್ವ ನೀಡಲಾಗುವುದು, ಹಾಗೆಯೇ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಈ ಬಾರಿಯ ಬಜೆಟ್ನಲ್ಲಿ ಹೊಸ ಅಂಶಗಳನ್ನು ಸೇರಿಸುವ ಕುರಿತು ಮುಂದಿನ ದಿನಗಳಲ್ಲಿ ಸಭೆ ನಡೆಸಿ ಎಲ್ಲರ ಅಭಿಪ್ರಾಯಗಳ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ರೈತರ ಉತ್ಪನ್ನಗಳ ಸಂಖ್ಯೆ ಹೆಚ್ಚಾಗಬೇಕು ಹಾಗೆಯೇ ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರಕುವಂತಹ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ" ಎಂದು ತಿಳಿಸಿದರು.
"ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದುಕೊಂಡ ಬಳಿಕ ವರಿಷ್ಠರ ನಿರ್ಧಾರದಂತೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ ಸಂದರ್ಭ ರೈತರ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಅಲ್ಲದೇ ಪ್ರವಾಹ ಸಂತ್ರಸ್ತರಿಗೆ ಅನುದಾನವನ್ನು ಸಹ ಬಿಡುಗಡೆ ಮಾಡಲು ಈಗಾಗಲೆ ಮನವಿ ಸಲ್ಲಿಸಿದ್ದೇನೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಗಮನಹರಿಸಲಿದ್ದಾರೆ" ಎಂದು ಹೇಳಿದರು.