ಬೆಂಗಳೂರು, ನ.17 (DaijiworldNews/AK):ಸರ್ಕಾರದ ದುಂಡಾವರ್ತಿ ವರ್ತನೆಯ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸರ್ಕಾರದ ದುಂಡಾವರ್ತಿಯನ್ನು ಖಂಡಿಸಿದ ಅವರು, ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕುತ್ತಿದ್ದಾರೆ. ಐದು ಲಕ್ಷ ರೂಪಾಯಿ ಬಾಂಡ್ ಕೊಡಿ ಇಲ್ಲವಾದರೆ ನಿಮ್ಮನ್ನ ರೌಡಿ ಲಿಸ್ಟ್ನಲ್ಲಿ ಸೇರಿಸುತ್ತೇವೆ ಎನ್ನುತ್ತಿದ್ದಾರೆ. ಈ ಸಂಬಂಧ ಇವತ್ತು ಪೊಲೀಸ್ ಮಹಾ ನಿರ್ದೇಶಕರನ್ನು (ಡಿಜಿ) ಇಂದು ಸಂಜೆ ಆರು ಗಂಟೆಗೆ ನಾವು ಭೇಟಿಯಾಗಲಿದ್ದೇವೆ ಎಂದು ವಿವರಿಸಿದರು.
ಬೆಳಗಾವಿ ಅಧಿವೇಶನದ ಎನ್ಡಿಎ ಕಾರ್ಯತಂತ್ರದ ಕುರಿತು ಚರ್ಚೆ ಮಾಡಲಾಗುತ್ತಿದೆ ಎಂದ ಅವರು, ಎಸ್ಸಿ ಎಸ್ಟಿ ಮೀಸಲಾತಿ, ಎಸ್ಸಿಪಿ ಟಿಎಸ್ಪಿ ಹಣದ ದುರ್ಬಳಕೆ, ದುರುಪಯೋಗ, ಬೆಲೆ ಏರಿಕೆ ವಿಚಾರಗಳು, ರೈತರ ಸಮಸ್ಯೆಗಳು, ಬರಗಾಲ ಪರಿಸ್ಥಿತಿಯ ವಿಚಾರಗಳು, ಭ್ರಷ್ಟಚಾರ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕೆಂದು ಯೋಚಿಸಿರುವುದಾಗಿ ವಿವರಿಸಿದರು. ಇನ್ನೊಂದು ವಾರದೊಳಗೆ ಅದಕ್ಕೆ ಏನೇನನ್ನು ಸೇರಿಸಬಹುದು; ನಿಲುವಳಿ ಸೂಚನೆಗ¼ನ್ನು ಯಾವ ಜಾಗದಲ್ಲಿ ಮಾಡಬೇಕು ಎಂದು ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಮಂಗಳೂರಿನಲ್ಲಿ ಒಂದು ದಿನದ ಕ್ಯಾಬಿನೆಟ್ ಮೀಟಿಂಗ್ ಮಾಡಿದ್ದಾರೆ. ನಾಲ್ಕು ಕೋಟಿ ಖರ್ಚಾಗಿದೆ. ಏನ್ ಮಾಡಿದ್ರಿ ಅಲ್ಲಿ? ಕಿಶ್ಮಿಶ್ ತಿನ್ನೋಕೆ ನಾಲ್ಕು ಕೋಟಿ ಖರ್ಚಾಗುತ್ತದೆಯೇ? ಅಥವಾ ಇಡ್ಲಿ ವಡೆಗೆ? ಮೀನು ತಿಂದಿರಬಹುದು, ಆದರೆ ನಾಲ್ಕು ಕೋಟಿ ಖರ್ಚಾಗುತ್ತದೆಯೇ? ನೂರು ದಿನಗಳ ಸಾಧನೆ ಸಮಾವೇಶ ಮಾಡಿದಾಗ ಹತ್ತು ಕೋಟಿ ಖರ್ಚಾಯ್ತಲ್ಲಾ? ಎಂದು ಕೇಳಿದರು
ಅಂಗವಿಕಲರ ಪಿಂಚಣಿ ಕೊಡುತ್ತಿಲ್ಲ. ವೃದ್ಧಾಪ್ಯ ವೇತನವೂ ಇಲ್ಲ. ಇವರ ಬಗ್ಗೆ ಚಿಂತೆ ಬೇಡವೇ ಸರ್ಕಾರಕ್ಕೆ? ಆದರೆ ದುಂದುವೆಚ್ಚ ಮಾಡೋದ್ರಲ್ಲಿ ಮುಂದಿದೆಯೇ ಹೊರತು ಸರ್ಕಾರ, ಸಮಸ್ಯೆಗಳನ್ನು ಆಲಿಸಿ ಪರಿಹಾರ ಕೊಡುವುದರಲ್ಲಿ ಬಹಳ ಹಿಂದೆ ಇದೆ. ಇಂತವುಗಳನ್ನೆಲ್ಲಾ ನಾವು ತೀಕ್ಷ್ಣವಾಗಿ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.
ಮುಖ್ಯಮಂತ್ರಿಗಳಿಗೆ ನಾನು ಹೇಳಲಿಕ್ಕೆ ಬಯಸುತ್ತೇನೆ, ಈ ಪ್ರಚಾರದ ಗಿಟ್ಟಿಸುವ ಕಾರ್ಯಕ್ರಮಗಳನ್ನು ಬಿಡಿ. ನೀವು ಕೊಡುವ ಜಾಹೀರಾತಿನ ಹಣವನ್ನು ಸರಿಯಾಗಿ ಬಳಸಿ. ಜಾಹೀರಾತಿನಿಂದ ಸರ್ಕಾರ ನಡೀಬೇಕು ಅಂತ ನೀವು ಚಿಂತೆ ಮಾಡಿದರೆ, ಜನ ಅದನ್ನು ವ್ಯತಿರಿಕ್ತವಾಗಿ ತಗೊಂಡು ನಿಮಗೆ ಬುದ್ಧಿ ಹೇಳುವ ಸಂದರ್ಭ ಬರಬಹುದು ಎಂದು ಎಚ್ಚರಿಸಿದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ನ ಒಳಗಡೆ ಸಮಸ್ಯೆ ಇದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಇವತ್ತು ಮುಖ್ಯಮಂತ್ರಿಯಾಗಿದ್ದಾರೆ. ಯಾರಿಂದ ಯಾವುದೇ ರೀತಿಯ ಅನುಮತಿ ಬೇಕಾಗಿಲ್ಲ; ಇವತ್ತೇ ನೀವು ಪ್ರಾರಂಭ ಮಾಡಬಹುದು ಎಂದು ಅವರು ಬೊಮ್ಮಾಯಿಯವರಿಗೆ ತಿಳಿಸಿದ್ದರು. ಇವತ್ತು ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ಇವತ್ತು ನೀವೇ ಮುಖ್ಯಮಂತ್ರಿಗಳು ಇದ್ದೀರಿ’ ತಕ್ಷಣ ಶುರು ಮಾಡಿಬಿಡಿ ಎಂದು ಒತ್ತಾಯಿಸಿದರು.
ತಮಿಳುನಾಡಿನದು ನಿಮ್ಮ ಕಾಂಗ್ರೆಸ್ ಅಲ್ವಾ? ಡಿ.ಕೆ. ಶಿವಕುಮಾರ್ ಸಾಹೇಬ್ರೆ ಎಂದು ಕೇಳಿದರು. "ಏ ನೀವು ಸತ್ತಂಗೆ ಮಾಡ್ರಿ ನಾವು ಅತ್ತಂಗೆ ಮಾಡ್ತೀವಿ" ಅಂತ ಇಲ್ಲಿ ಇದು ಆಟನಾ ನಿಮ್ಮಿಬ್ಬರದು? ಎಂದು ಪ್ರಶ್ನಿಸಿದರು.