ನವದೆಹಲಿ, ನ.17 (DaijiworldNews/AK): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆತ್ಮಕತೆ ‘ಬಿಲಾಂಗಿಂಗ್’ ಅಧಿಕೃತವಾಗಿ ನಿನ್ನೆ ಬಿಡುಗಡೆಯಾಗಿದೆ.

ಈ ಕಾರ್ಯಕ್ರಮದಲ್ಲಿ ತನ್ನ ತಾಯಿಯ ಹಳೆಯ ದಿನಗಳನ್ನು ಮೆಲುಕು ಹಾಕಿದ್ದ ರಾಹುಲ್ ಗಾಂಧಿಯವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. “ನಮ್ಮ ಮನೆಯಲ್ಲಿ ಪ್ರತಿ ದಿನ ಊಟ ಮಾಡುವಾಗಲೂ ನನ್ನ ತಾಯಿ ಸೋನಿಯಾ ಗಾಂಧಿ ನನ್ನ ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಅವರ ನಡುವೆ ಅಷ್ಟು ಆಪ್ತ ಸಂಬಂಧ ಮತ್ತು ಪ್ರೀತಿಯಿತ್ತು” ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆಗೆ ವ್ಯಕ್ತವಾದ ಟೀಕೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಿರುಗೇಟು ನೀಡಿದ್ದಾರೆ.
ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಹಾಗೂ ಆರ್ಎಸ್ಎಸ್ ಬೆಂಬಲಿಗರ ಸುತ್ತ ಬಲೆಯೊಂದನ್ನು ಹೆಣೆದಿದ್ದು, ಅದು ಅವರನ್ನು ಪ್ರೀತಿಯನ್ನು ಅನುಭವಿಸುವುದರಿಂದ ಮತ್ತು ವ್ಯಕ್ತಪಡಿಸುವುದರಿಂದ ತಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಂದೂ ಧರ್ಮದ ಕುರಿತಾದ ತಮ್ಮ ನಂಬಿಕೆಯನ್ನು ಉಲ್ಲೇಖಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಆ ಬಲೆಯಿಂದ ಅವರನ್ನು ಮುಕ್ತಗೊಳಿಸುವುದು ತಮ್ಮ ಕರ್ತವ್ಯವಾಗಿದ್ದು, ಆ ಮೂಲಕ ಅವರು ಪ್ರೀತಿ ಮತ್ತು ಬಿಲಾಂಗಿಂಗ್ ಆನಂದವನ್ನು ಅನುಭವಿಸಬಹುದು ಎಂದಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಮತ್ತು ಆರ್ಎಸ್ಎಸ್ ಬೆಂಬಲಿಗರ ಹೃದಯದಲ್ಲಿ ಬಲೆಯೊಂದನ್ನು ಹೆಣೆದಿದ್ದು, ಅದು ಅವರನ್ನು ಪ್ರೀತಿಯನ್ನು ಅನುಭವಿಸುವುದರಿಂದ ಮತ್ತು ವ್ಯಕ್ತಪಡಿಸುವುದರಿಂದ ತಡೆಯುತ್ತಿದೆ. ಒಬ್ಬ ನಿಜವಾದ ಹಿಂದುವಾಗಿ, ಅವರನ್ನು ಈ ಬಲೆಯಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯವಾಗಿದೆ. ಆ ಮೂಲಕ ಅವರೂ ಸಹ ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಸಂಬಂಧದ ಅಪೂರ್ವ ಆನಂದವನ್ನು ಅನುಭವಿಸಲು ಸಹಾಯಕವಾಗಬಹುದು” ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್ ಅನ್ನು “ಸತ್ಯಂ ಶಿವಂ ಸುಂದರಂ” ಎಂಬ ಸಾಲುಗಳೊಂದಿಗೆ ರಾಹುಲ್ ಮುಕ್ತಾಯಗೊಳಿಸಿದ್ದಾರೆ.