ಅಮರಾವತಿ, ನ.17 (DaijiworldNews/AK): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಈಗ ‘ಅಕ್ವಾನ್’ ಚಂಡಮಾರುತವಾಗಿ ಬದಲಾಗಿದ್ದು, ಎರಡು ದಿನಗಳಲ್ಲಿ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ.

ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ, ನವೆಂಬರ್ 20ರ ಮಧ್ಯಾಹ್ನದ ವೇಳೆಗೆ ಅಕ್ವಾನ್ ಚಂಡಮಾರುತವು ಆಂಧ್ರಪ್ರದೇಶದ ನೆಲ್ಲೂರು ಮತ್ತು ತುನಿ ನಡುವೆ ಕರಾವಳಿ ದಾಟಲಿದೆ. ಈ ವೇಳೆ ಗಂಟೆಗೆ 120 ರಿಂದ 130 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ 145 ಕಿ.ಮೀ.ವರೆಗೂ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಚಂಡಮಾರುತದ ಪರಿಣಾಮ ನವೆಂಬರ್ 19 ಮತ್ತು 20 ರಂದು ಕರಾವಳಿ ಆಂಧ್ರಪ್ರದೇಶದ ಕೊನಸೀಮಾ, ಕಾಕಿನಾಡ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣ, ಎನ್ಟಿಆರ್ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
ಒಡಿಶಾದಲ್ಲಿ ನವೆಂಬರ್ 18 ರಿಂದ 21 ರವರೆಗೆ ಮಳೆ ಅಬ್ಬರಿಸಲಿದ್ದು, ಪುರಿ, ಗಂಜಾಂ, ಗಜಪತಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲೂ ನವೆಂಬರ್ 20 ರವರೆಗೆ ಮಳೆಯಾಗಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.