ಹರಿಯಾಣ, ನ.18 (DaijiworldNews/AK): ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಐಎಎಸ್ ಅಧಿಕಾರಿ ವಿವೇಕ್ ಆರ್ಯ ಅವರ ಯಶೋಗಾಥೆ ಇಲ್ಲಿದೆ.

ವಿವೇಕ್ ಆರ್ಯ ಮೇ 19, 1998 ರಂದು ಹರಿಯಾಣದ ಚರ್ಖಿ ದಾದ್ರಿ ಜಿಲ್ಲೆಯ ಗೋಪಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ವೀರೇಂದ್ರ ಸಿಂಗ್ ಆರ್ಯ ಉದ್ಯಮಿಯಾಗಿದ್ದಾರೆ.
ವಿವೇಕ್ ಆರ್ಯ ಅವರು ಐಎಎಸ್ ಅಧಿಕಾರಿಯಾದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅವರು, ಬಳಿಕ 12ನೇ ತರಗತಿಯವರೆಗೆ ಕುಂಜ್ಪುರದ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದರು. ಚಂಡೀಗಢದಲ್ಲಿ ಉನ್ನತ ವ್ಯಾಸಂಗ ಪೂರೈಸಿದ ವಿವೇಕ್, ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 131ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ವಿವೇಕ್ ಆರ್ಯ ಅವರು ಹರಿಯಾಣ ಕೇಡರ್ನ 2021ನೇ ಬ್ಯಾಚ್ನ ಭಾರತೀಯ ಆಡಳಿತ ಸೇವಾ (IAS) ಅಧಿಕಾರಿಯಾಗಿದ್ದಾರೆ. ಅವರು ಪ್ರಸ್ತುತ ಹರಿಯಾಣದ ಪಂಚಕುಲ ಜಿಲ್ಲೆಯ ಹೆಚ್ಚುವರಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಡಿಎವಿ ಕಾಲೇಜಿನಿಂದ (DAV College) ಇಂಗ್ಲಿಷ್/ಅರ್ಥಶಾಸ್ತ್ರದಲ್ಲಿ ಬಿ.ಎ ಪದವಿ ಪಡೆದಿದ್ದು, ದೆಹಲಿ ವಿಶ್ವವಿದ್ಯಾಲಯ ಮತ್ತು ಜೆಎನ್ಯುನಲ್ಲೂ (JNU) ಉನ್ನತ ವ್ಯಾಸಂಗ ಮಾಡಿದ್ದಾರೆ.
2020ರ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 131ನೇ ರ್ಯಾಂಕ್ ಪಡೆಯುವ ಮೂಲಕ 23ನೇ ವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾದರು. ಆಗಸ್ಟ್ 2026 ರಿಂದ ಪಂಚಕುಲದ ಹೆಚ್ಚುವರಿ ಉಪ ಆಯುಕ್ತರಾಗಿ (ADC), ಜಿಲ್ಲಾ ಪರಿಷತ್ ಸಿಇಒ ಆಗಿ ಮತ್ತು ಶ್ರೀ ಮಾತಾ ಮಾನಸ ದೇವಿ ಶ್ರೈನ್ ಬೋರ್ಡ್ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ವಿವೇಕ್ ಆರ್ಯ ಅವರು 2021ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಅದಿತಿ ಸಿಂಗ್ ಅವರನ್ನು ನವೆಂಬರ್ ೧೫ 2026 ರಲ್ಲಿ ಪಂಚಕುಲದಲ್ಲಿ ವಿವಾಹವಾಗಿದ್ದಾರೆ. ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ (LBSNAA) ತರಬೇತಿ ಪಡೆಯುತ್ತಿದ್ದಾಗ ಪರಿಚಯವಾದ ಇವರಿಬ್ಬರೂ ಪ್ರಸ್ತುತ ಪಂಚಕುಲ ಜಿಲ್ಲೆಯಲ್ಲಿಯೇ (ವಿವೇಕ್ ಎಡಿಸಿ ಆಗಿ ಮತ್ತು ಅದಿತಿ ಡಿಸಿಪಿ ಆಗಿ) ಕರ್ತವ್ಯ ನಿರ್ವಹಿಸುತ್ತಿದ್ದಾರೆ