ಶ್ರೀನಗರ, ನ.18 (DaijiworldNews/AK): ಕುಲ್ಗಾಮ್ನ ಸಿಆರ್ಪಿಎಫ್ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಲತೀಫ್ ಭಟ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಮತ್ತೆ ಗುಂಡಿನ ಚಕಮಕಿ ಆರಂಭವಾಗಿತ್ತು. ಈ ವೇಳೆ, ಉಗ್ರ ಲತೀಫ್ ಭಟ್ ಅಡಗಿದ್ದ ಮಸೀದಿಯನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದವು. ಆತನಿಗೆ ಶರಣಾಗುವಂತೆ ಪೊಲೀಸರು ವಿಡಿಯೋ ಕರೆ ಮಾಡಿದ್ದರು. ಆದರೆ ಉಗ್ರ ಶರಣಾಗಲು ನಿರಾಕರಿಸಿದ್ದ. ಈ ವೇಳೆ, ಭದ್ರತಾ ಪಡೆಗಳು ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿವೆ.
ಮಸೀದಿಯಲ್ಲಿ ಅಡಗಿದ್ದ ಉಗ್ರನನ್ನು ಶರಣಾಗುವಂತೆ ಮಾಡಲು ಭದ್ರತಾ ಪಡೆಗಳು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ್ದರು. ಈ ವೇಳೆ ಅಧಿಕಾರಿಯೊಬ್ಬರು, ಹಮ್ ತುಮ್ಹಾರೆ ಸಾಥ್ ಹೈ (ನಾವು ನಿನ್ನೊಂದಿಗಿದ್ದೇವೆ) ಎಂದು ಹೇಳಿರುವುದು ಕೇಳಿಬಂದಿದೆ. ಆದರೆ, ಶರಣಾಗತಿಗೆ ನಿರಾಕರಿಸಿದ ಲತೀಫ್ ಭಟ್, ʻಮುಝೆ ಅಲ್ಲಾ ಸೆ ಮುಲಾಕಾತ್ ಕರ್ನಾ ಹೈ, ಮೈ ಬಹುತ್ ಖುಷ್ ಹೂಂ (ನಾನು ಅಲ್ಲಾಹನನ್ನು ಭೇಟಿಯಾಗಬೇಕು, ನನಗೆ ತುಂಬಾ ಸಂತೋಷವಾಗಿದೆ)ʼ ಎಂದು ಪ್ರತಿಕ್ರಿಯಿಸಿದ್ದ.
ಲತೀಫ್ ಭಟ್ನ ಸಹಚರ ಉಮರ್ ನಿಸಾರ್ ದಾರ್ ಸೋಮವಾರ ಕುಲ್ಗಾಮ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಮಂಗಳವಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಬಿಡುಗಡೆ ಮಾಡಿದ್ದು, ನವೆಂಬರ್ 11ರಂದು ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸುವ ಮುನ್ನ ಉಮರ್ ದಾರ್ ಮತ್ತು ಲತೀಫ್ ಭಟ್ ಸ್ಥಳಗಳ ಪರಿಶೀಲನೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿವೆ.