ಬೆಂಗಳೂರು, ನ.18 (DaijiworldNews/AA): ರಾಜ್ಯಾದ್ಯಂತ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿರುವ ಕರ್ನಾಟಕ ಸರ್ಕಾರ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತದ ಮೇಲೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ನವೆಂಬರ್ 21ರಿಂದ ಡಿಸೆಂಬರ್ 11ರವರೆಗೆ ಈ ರಿಯಾಯಿತಿ ಸೌಲಭ್ಯ ಲಭ್ಯವಿರಲಿದೆ.

ನಿಗದಿತ ಅವಧಿಯೊಳಗೆ ಬಾಕಿ ಇರುವ ದಂಡದ ಮೊತ್ತದಲ್ಲಿ ಕೇವಲ ಶೇ. 50ರಷ್ಟನ್ನು ಪಾವತಿಸುವ ಮೂಲಕ ವಾಹನ ಸವಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಈ ಹಿಂದೆ ನೀಡಿದ್ದ ರಿಯಾಯಿತಿ ಅವಧಿಯನ್ನು ವಿಸ್ತರಿಸುವಂತೆ ಸಾರ್ವಜನಿಕರಿಂದ ಮನವಿಗಳು ಕೇಳಿಬಂದಿದ್ದವು. ಈ ಮನವಿಗಳನ್ನು ಪರಿಗಣಿಸಿರುವ ಸರ್ಕಾರ, ವಾಹನ ಸವಾರರಿಗೆ ಮತ್ತೊಮ್ಮೆ ಈ ರಿಯಾಯಿತಿ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ.
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು, ಈ ನಿಗದಿತ ಅವಧಿಯೊಳಗೆ ಅರ್ಧದಷ್ಟು ದಂಡದ ಮೊತ್ತವನ್ನು ಪಾವತಿಸಿ ತಮ್ಮ ಬಾಕಿಯನ್ನು ಚುಕ್ತಾ ಮಾಡಬಹುದಾಗಿದೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ವಾಹನ ಮಾಲೀಕರು ತಮ್ಮ ಬಾಕಿ ದಂಡವನ್ನು ಪಾವತಿಸಲು ಉತ್ತೇಜಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
ವಾಹನ ಸವಾರರು ನವೆಂಬರ್ 21ರಿಂದ ಡಿಸೆಂಬರ್ 11ರವರೆಗಿನ ಈ ರಿಯಾಯಿತಿ ಅವಧಿಯ ಸದುಪಯೋಗ ಪಡೆದುಕೊಂಡು, ತಮ್ಮ ಬಾಕಿ ಇರುವ ಸಂಚಾರ ದಂಡವನ್ನು ರಿಯಾಯಿತಿ ದರದಲ್ಲಿ ಪಾವತಿಸಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.