ಬೆಂಗಳೂರು, ಜ.05 (Daijiworld News/PY) : ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಡಿ.ಕೆ. ಶಿವಕುಮಾರ್ ಜ.05ರ ಭಾನುವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಮ್ಮಿಶ್ರ ಸರ್ಕಾರದ ಆಡಳಿತ ಇರುವ ಸಂದರ್ಭ ಕುಮಾರಸ್ವಾಮಿ ಜೊತೆ ಓಡಾಟ ನಡೆಸುತ್ತಿದ್ದ ಡಿ.ಕೆ ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಅವರು ಕೋಪಗೊಂಡಿದ್ದರು. ಆದರೆ ದಿಢೀರನೆ ಡಿಕೆಶಿ ಅವರು ಸಿದ್ದರಾಮಯ್ಯ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದು ಇದನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತರಿಗೆ ನೀಡಬೇಕು ಎಂದು ಸಿದ್ದರಾಮಯ್ಯ ಬಣ ಪಟ್ಟು ಹಿಡಿದಿದ್ದು, ತಮ್ಮ ಶಿಷ್ಯ ಎಂಬಿ ಪಾಟೀಲ್ ಪರವಾಗಿದ್ದಾರೆ. ಈ ಕಡೆ ಮೂಲ ಕಾಂಗ್ರೆಸ್ ನಾಯಕರು ಮುನಿಯಪ್ಪ, ಹರಿಪ್ರಸಾದ್ ಸೇರಿದಂತೆ ಮೂಲ ಕಾಂಗ್ರೆಸ್ ನಾಯಕರ ಪರ ನಿಂತಿದ್ದಾರೆ. ಈ ನಡುವೆ ಡಿಕೆಶಿ ಅವರು ಮಾತ್ರ ಅಧ್ಯಕ್ಷ ಸ್ಥಾನಕ್ಕಾಗಿ ಏಕಾಂಗಿಯಾಗಿ ಓಡಾಡುತ್ತಿದ್ದು, ಸಿದ್ದರಾಮಯ್ಯ ತನ್ನ ಶಿಷ್ಯ ಎಂಬಿ ಪಾಟೀಲ್ ಪರ ನಿಂತಿರುವ ಕಾರಣ ತನಗೆ ಇನ್ನು ಅಧ್ಯಕ್ಷ ಸ್ಥಾನ ದೊರಕುವುದಿಲ್ಲ ಎಂಬ ಭಯ ಉಂಟಾಗಿದ್ದು, ಈ ಕುರಿತು ಮಾತನಾಡಲು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರಬಹುದೇ ಎಂಬ ಅನುಮಾನ ಮೂಡಿದೆ.