ಬೆಂಗಳೂರು, ನ.18 (DaijiworldNews/AK): ಭಾರತ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಚಟುವಟಿಕೆಗಳನ್ನು ರಾಹುಲ್ ಗಾಂಧಿಯವರು ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇಂಡಿಯನ್ ಎಕಾನಮಿ ಇಸ್ ಎ ಡೆಡ್ ಎಕಾನಮಿ ಎಂದಿರುವ ಇಟಲಿಯಿಂದ ಜನರನ್ನು ಕರೆಸಿ ದೇಶವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಈ ದೇಶದಲ್ಲಿ ಯಾವಾಗ ಅರಾಜಕತೆ ಸೃಷ್ಟಿ ಮಾಡಬೇಕೆಂದು ಅನಿಸುತ್ತೋ, ಆಗ ಹೊರದೇಶದವರ ಒಟ್ಟಿಗೆ ಹೋಗಿ ಚರ್ಚೆ ಮಾಡುತ್ತಾರೆ. ದೇಶವಿರೋಧಿ ಚಟುವಟಿಕೆಗಳಿಗೆ ಹೊರದೇಶದಲ್ಲಿ ಕುಳಿತಿರುವ ಭಾರತ ವಿರೋಧಿಗಳಿಂದ ಸಲಹೆ ಸೂಚನೆಗಳನ್ನು ಹೊತ್ತು ತರುತ್ತಿದ್ದಾರೆ ಎಂದು ಟೀಕಿಸಿದರು.
ಗಾಂಧಿ ಕುಟುಂಬ ಎಂಬ ಒಂದೇ ಕಾರಣದಿಂದ ರಾಹುಲ್ ಗಾಂಧಿಯವರನ್ನು ಓಲೈಕೆ ಮಾಡುವ ಕೆಲಸವನ್ನು ಕಾಂಗ್ರೆಸ್ಸಿನ ಕೆಲವರು ಮಾಡ್ತಿದ್ದಾರೆ. ಈ ದೇಶವಿರೋಧಿ ಚಟುವಟಿಕೆ ಮಾಡತಕ್ಕಂತಹ ಇಂತಹ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ದೇಶ ಒಪ್ಪಬಾರದು. ಆದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಡುವ ಕಾರಣದಿಂದ ಅದನ್ನು ತಿರಸ್ಕಾರ ಮಾಡಲು ಬರುವುದಿಲ್ಲ ಎಂದು ನುಡಿದರು.
ಕೇಂದ್ರ ಸರ್ಕಾರ ಯಾಕೆ ಸುಮ್ಮನೆ ಕುಳಿತಿದೆ? ಅವರ ಮೇಲೆ ಯಾಕೆ ನೀವು ಕ್ರಮ ಜರುಗಿಸುವುದಿಲ್ಲ? ಅಂತ ನೀವು ಕೇಳಬಹುದು. ಒಮ್ಮೆಲೇ ಅವರ ಮೇಲೆ ಕ್ರಮ ಜರುಗಿಸಿದರೆ ಅದಕ್ಕೆ ಅರ್ಥ ಬರೋದಿಲ್ಲ. ಅವರು ತಪ್ಪುಗಳನ್ನು ಏನೇನು ಮಾಡ್ತಿದ್ದಾರೋ ಅದು ಈ ದೇಶದ ಜನರಿಗೆ ಗೊತ್ತಾಗಬೇಕು. ಈ ದೇಶಕ್ಕೆ ಯಾವ ರೀತಿ ಗಂಡಾಂತರ ತಂದೊಡ್ಡುವ ಪ್ರಯತ್ನಗ¼ನ್ನು ಮಾಡ್ತಿದ್ದಾರೋ, ಅದು ದೇಶವಾಸಿಗಳಿಗೆ ಗೊತ್ತಾಗಬೇಕು. ಆಗ ದೇಶವಾಸಿಗಳು ಕೂಡ ಅವರಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತಾರೆ. ಜೊತೆಗೆ ಸರ್ಕಾರವೂ ಕೂಡ ಕೆಲಸ ಮಾಡಬೇಕು ಎಂದು ನುಡಿದರು.