ನವದೆಹಲಿ, ನ.18 (DaijiworldNews/AA): 'ಭಾರತದ ಆರ್ಥಿಕತೆ ಸತ್ತು ಹೋಗಿದೆ' ಎಂದು ದೇಶದ ಆರ್ಥಿಕತೆಯ ಸ್ಥಿತಿಯ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಜಾಗತಿಕ ಹಣಕಾಸು ಸಂಸ್ಥೆಯೊಂದು ನೀಡಿರುವ ಹೊಸ ವರದಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು, "ಗೋಲ್ಡ್ಮನ್ ಸ್ಯಾಚ್ಸ್ ನೀಡಿರುವ ಈ ವರದಿಯೇ ರಾಹುಲ್ ಗಾಂಧಿಯವರ ಸುಳ್ಳನ್ನು ಬಯಲು ಮಾಡಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ದುರ್ಬಲ ಆರ್ಥಿಕತೆಯ ಪಟ್ಟಿಯಿಂದ ಹೊರಬಂದು, ಇಂದು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ನಿಂತಿದೆ" ಎಂದು ಪೋಸ್ಟ್ ಮಾಡಿದ್ದಾರೆ.
2027ರ ವೇಳೆಗೆ ಭಾರತದ ಜಿಡಿಪಿ ಬೆಳವಣಿಗೆ ಶೇ. 7.2 ರಷ್ಟು ಇರಲಿದೆ. ವಿಶೇಷ ಅಂದ್ರೆ, ಇದು ಚೀನಾ (ಶೇ. 4.5), ಅಮೆರಿಕ (ಶೇ. 2.4) ಮತ್ತು ಯುರೋಪ್ (ಶೇ. 0.9) ದೇಶಗಳಿಗಿಂತಲೂ ತುಂಬಾ ಹೆಚ್ಚಿದೆ.
"ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಟ್ಟರೆ, ದೇಶದ ಆರ್ಥಿಕತೆ ಸಂಕಷ್ಟದಲ್ಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ" ಎಂದು ರಾಹುಲ್ ಗಾಂಧಿ ಈ ಹಿಂದೆ ಕಿಡಿಕಾರಿದ್ದರು.