ಲಕ್ನೋ, ಜ 05 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆದಿದ್ದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರಿಗೆ ಜಿಲ್ಲಾಡಳಿತ ನೋಟಿಸ್ ನೀಡಿದ್ದು ಈ ಸಂದರ್ಭದಲ್ಲಿ ಆರು ವರ್ಷಗಳ ಹಿಂದೆ ಪಿರೋಜಾಬಾದ್ ನಲ್ಲಿ ಮೃತರಾಗಿರುವ 87 ವರ್ಷದ ಬನ್ನೆಖಾನ್ ವರಿಗೂ ನೋಟಿಸ್ ನೀಡಿದೆ. ಅಷ್ಟು ಮಾತ್ರವಲ್ಲದೇ ದೆಹಲಿಯ ಗಂಗಾರಾಮ್ ಆಸ್ಪತ್ರೆಯಿಂದ ವಾಪಸ್ ಆದ 90 ವರ್ಷದ ಸೂಫಿ ಅನ್ಸಾರ್ ಹುಸೇನ್, ತಿಂಗಳುಗಳಿಂದ ಆರೋಗ್ಯ ಹದಗೆಟ್ಟು ಮಲಗಿರುವ ಕೊಟ್ಲಾ ಮೊಹಲ್ಲಾದ 93 ವರ್ಷದ ಫಸಹತ್ ಮೀರ್ ಖಾನ್ ಅವರಿಗೂ ನೋಟಿಸ್ ನೀಡಿದ್ದು ಉತ್ತರ ಪ್ರದೇಶ ಸರಕಾರ ಟೀಕೆಗೆ ಒಳಗಾಗಿದೆ.
ಸುಮಾರು 200ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದ್ದು ಅವರು ತನಿಖೆಗೆ ಹಾಜರಾಗಬೇಕಿದ್ದು ಘಟನೆಗೆ ಸಂಬಂಧ ಪಡದವರಿಗೆ ನೋಟಿಸ್ ನೀಡಿದಕ್ಕಾಗಿ ಹಾಗೂ ಮೃತಪಟ್ಟವರಿಗೂ ನೋಟಿಸ್ ನೀಡಿದಕ್ಕಾಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮೃತ ಬನ್ನೆಖಾನ್ ಅವರಿಗೆ ನೋಟಿಸ್ ನೀಡಿರುವುದನ್ನು ತೀವ್ರವಾಗಿ ಖಂಡಿಸಿರುವ ಅವರ ಪುತ್ರ ಪರ್ವೇಜ್ ಖಾನ್, "ಕನಿಷ್ಠ ಪರಿಶೀಲನೆ ನಡೆಸದೆ ಇದ್ದ ಬದ್ದವರಿಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ನಾನು ಸ್ಥಳೀಯ ಪತ್ರಿಕೆಯಲ್ಲಿ ಓದಿದ್ದೇನೆ. ನನ್ನ ತಂದೆ ೨೦೧೪ರಲ್ಲೇ ಉಸಿರಾಟದ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿಸೆಂಬರ್ 20 ರಂದು ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಿತ್ತು ಈ ಹಿನ್ನೆಲೆ ಜಿಲ್ಲಾಡಳಿತವು ಹಿಂಸೆ ಮಾಡಿದವರಿಗೆ ನೋಟಿಸ್ ನೀಡಿ ಜಾಮೀನು ಪಡೆಯಲು ಸೂಚನೆ ಮಾಡಿತ್ತು. ಆದರೆ ನೊಟೀಸ್ ನೀಡುವ ಸಂದರ್ಭದಲ್ಲಿ ತಪ್ಪಾಗಿದ್ದು ಹಲವರ ವಿರೋಧಕ್ಕೆ ಕಾರಣವಾಗಿದೆ.