ಲಕ್ನೋ, ಜ.05 (Daijiworld News/PY) : "ಇಡೀ ವಿಶ್ವವೇ ಒಂದು ಕುಟುಂಬ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದೇ ಭಾರತ, ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ನಮ್ಮ ಪಕ್ಷ ನಾಶಪಡಿಸುವುದಿಲ್ಲ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜ.05ರ ಭಾನುವಾರ ಪೌರತ್ವದ ಕುರಿತು ಅರಿವು ಮೂಡಿಸುವ ಸಲುವಾಗಿ ಲಕ್ನೋಗೆ ಭೇಟಿ ನೀಡಿ ಮಾತನಾಡಿದ ರಾಜನಾಥ್ ಸಿಂಗ್ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜನರು ಯಾವುದೇ ತಪ್ಪು ಕಲ್ಪನೆಗಳನ್ನು ಹೊಂದಬಾರದು. ಸಿಎಎಯ ಬಗ್ಗೆ ಯಾವುದೇ ರೀತಿಯಾದ ತಪ್ಪು ಕಲ್ಪನೆಗಳನ್ನು ಹೊಂದದಂತೆ ಜನರಿಗೆ ಸಂದೇಶ ನೀಡಲು ನಮ್ಮ ಪಕ್ಷ ನಿರ್ಧಾರಮಾಡಿದೆ" ಎಂದರು.
"ಭಾರತೀಯ ಸಂಸ್ಕ್ರತಿಯು ನಮಗೆ ಸರ್ವ ಧರ್ಮ ಸಮನ್ವಯದ ಪಾಠ ಕಲಿಸಿದೆ. ಹಿಂದೂಸ್ತಾನಿಯರಿಗೆ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಾಗದು" ಎಂದು ತಿಳಿಸಿದ್ದಾರೆ.
ಪೌರತ್ವ ಕಾಯ್ದೆಯ ವಿರುದ್ದ ನಡೆದ ಹಿಂಸಾಚಾರದ ವೇಳೆ ಉತ್ತರ ಪ್ರದೇಶದಲ್ಲಿ 19 ಜನ ಮೃತಪಟ್ಟಿದ್ದು, ಈ ಘಟನೆ ನಡೆದ ಕೆಲವೇ ದಿನಗಳ ನಂತರ ರಾಜನಾಥ್ ಅವರು ಅಲ್ಲಿಗೆ ಭೇಟಿ ನೀಡಿದ್ದರು. ಸಿಎಎಯ ಬಗ್ಗೆ ಮಾಹಿತಿಯಿರುವ ಕರಪತ್ರಗಳನ್ನೂ ನೀಡಿದ್ದು, ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದ್ದಾರೆ.