ಬೆಂಗಳೂರು, ಜ.05 (Daijiworld News/PY) : ರಾಮನಗರದ ಹೆಸರನ್ನು ನವಬೆಂಗಳೂರು ಎಂದು ಬದಲಾಯಿಸುವ ಬಿಜೆಪಿ ಸರ್ಕಾರದ ನಿರ್ಧಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪಕ್ಕದಲ್ಲೇ ಕಾವೇರಿ ನದಿ ಇದೆ. ಇಗ್ಗಲೂರಿನಲ್ಲಿ ದೇವೇಗೌಡ ಬ್ಯಾರೇಜ್ ಇದೆ. ಮಾಗಡಿಗೆ ಹೇಮೆ ಹರಿಯಲಿದ್ದಾಳೆ. ಚಿನ್ನದಂಥ ಭೂಮಿ ಇದೆ. ಮುಗ್ಧ ಜನರಿದ್ದಾರೆ. ಬೆಂಗಳೂರಿಗೆ ಪಕ್ಕದಲ್ಲೇ ಇರುವ ಈ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿ ಇದೆ. ನನ್ನ ಮೇಲಿನ ರಾಜಕೀಯ ವೈಷಮ್ಯವೂ ಇದೆ ಎಂದು ಹೇಳಿದ್ದಾರೆ.
ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಊರು ಇನ್ನೂ ಮುಂದೆ ಹೋಗಬಾರದು ಎಂದು ನಾಲ್ಕು ದಿಕ್ಕುಗಳಿಗೆ ಗಡಿ ಗೋಪುರ ಕಟ್ಟಿದ್ದರು. ಆದರೆ ನಾವು ಅದನ್ನೆಲ್ಲ ಎಂದೋ ದಾಟಿದೆವು. ಕೆಂಪೇಗೌಡರ ಇಚ್ಛೆ ಮೀರಿದೆವು. ಕೆರೆ ಕಾಲುವೆ ಮುಚ್ಚಿದೆವು ಪರಿಣಾಮ ಬೆಂಗಳೂರು ಇಂದು ಸಮಸ್ಯೆಗಳ ಕೂಪ ಎಂದು ತಿಳಿಸಿದ್ದಾರೆ.
ಅಷ್ಟಕ್ಕೂ ಹೆಸರಲ್ಲಿ ಏನಿದೆ. ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಇದೇ ಹೆಸರಿಡಬಹುದಲ್ಲವೇ? ಅದು ನಿಮಗೆ ಸಾಧ್ಯವೇ? ರಾಮನಗರದ ಹೆಸರು ಬದಲಾಯಿಸಲು ಬರುವ ಬಿಎಸ್ವೈ ಅವರು ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ? ದಕ್ಷಿಣ ಕನ್ನಡಕ್ಕೆ? ಎಂದು ಕೇಳಿದ್ದಾರೆ.
ರಾಮನಗರವನ್ನು ಜಿಲ್ಲೆಯ ಸುತ್ತ ಸಪ್ತ ಬೆಟ್ಟಗಳಿವೆ. ಏಳು ಬೆಟ್ಟಗಳ ನಡುವೆ ಇರುವುದೇ ರಾಮದೇವರ ಬೆಟ್ಟ. ಅದಕ್ಕಾಗಿಯೇ ರಾಮನಗರ ತಾಲೂಕು ಆಗಿದೆ. ರಾಮನ ಹೆಸರನ್ನೇ ಜಿಲ್ಲೆಗೂ ಇಟ್ಟಿದ್ದೇನೆ. ಇದನ್ನು ಮೀರಿ ಹೆಸರು ಬದಲಿಸಿದರೆ ಅದು ಬಿಜೆಪಿಯೇ ಪ್ರತಿಪಾದಿಸುವ ಸಿದ್ಧಾಂತಗಳಿಗೆ ಮಾಡಿದ ಅಪಚಾರ. ರಾಮನ ಹೆಸರಿಗೆ ಆಗುವ ಅಪಮಾನ ಎಂದಿದ್ದಾರೆ.
ಈ ಜಿಲ್ಲೆ ಗಂಗರು ಆಳಿದ ನಾಡು. ಬಾಲಗಂಗಾಧರನಾಥರ, ಶಿವಕುಮಾರ ಶ್ರೀಗಳ ಜನ್ಮಭೂಮಿ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಶಕ್ತಿಸ್ಥಳ. ಇದೆ ಹೆಸರನ್ನು ಬೆಂಗಳೂರು ಎಂದು ಬದಲಿಸಿದರೆ ಜಿಲ್ಲೆಯ ಐತಿಹ್ಯ ಅಳಿಯಲಿದೆ.ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.