ಬೆಳಗಾವಿ, ಜ.05 (Daijiworld News/PY) : "ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ನಿಭಾಯಿಸಲು ಶಕ್ತ" ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು, "ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವವರಿಗೆ ಪಕ್ಷ ಗುರುತಿಸಿ ಜವಾಬ್ದಾರಿ ನೀಡುತ್ತದೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿ ಎಂದು ಬೇಡಿಕೆ ಇಟ್ಟಿಲ್ಲ, ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕೆಂಬುದನ್ನು ಪಕ್ಷ ತಿರ್ಮಾನ ತೆಗೆದುಕೊಳ್ಳಲಿದೆ. ಕೆಪಿಸಿಇ ಅಧ್ಯಕ್ಷ ಸ್ಥಾನಕ್ಕೆ ಯಾರೇ ಬಂದರೂ ಅವರಿಗೆ ಸಹಕಾರ ನೀಡುತ್ತೇವೆ, ಹೈಕಮಾಂಡ್ ಮೇಲೆ ಎಲ್ಲಾ ಜವಾಬ್ದಾರಿ ಇದೆ. ಪಕ್ಷ ಸಂಘಟನೆಗೆ ಎಲ್ಲರೂ ಒಟ್ಟಾಗಿ ತೆರಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ" ಎಂದು ತಿಳಿಸಿದರು.
ಶನಿವಾರ ನಡೆಸಿದ ಸಭೆಯಲ್ಲಿ ಯಾರ ಹೆಸರೂ ಚರ್ಚೆಯಾಗಿಲ್ಲ, ಉಪಚುನಾವಣೆ ಸೋಲಿನಿಂದ ಆತಂಕಗೊಳ್ಳುವ ಅಗತ್ಯ ಇಲ್ಲ. ನಮ್ಮಲ್ಲಿ ಬಹಳಷ್ಟು ಜನ ಅಧ್ಯಕ್ಷ ಸ್ಥಾನವನ್ನು ಮುಂದುವರಿಸಲು ಸಮರ್ಥರಾಗಿದ್ದಾರೆ.ಈ ಬಗ್ಗೆ ಎಐಸಿಸಿ ವೀಕ್ಷಕರು ಬಂದು ಸಮೀಕ್ಷೆ ಮಾಡಿ ಅಭಿಪ್ರಾಯ ಸಂಗ್ರಹಿಸಿಕೊಂಡು ಹೋಗಿರುವುದಾಗಿ ತಿಳಿಸಿದರು.
ನಾಲ್ಕು ಕಾರ್ಯಾಧ್ಯಕ್ಷರ ನೇಮಕದ ಬಗ್ಗೆ ಹೈಕಮಾಂಡ್ ದೆಹಲಿಯಲ್ಲಿ ಚರ್ಚೆಗೆ ಕರೆಯಲಿದ್ದು, ಪ್ರಾದೇಶಿಕವಾರು, ಜಾತಿವಾರು ಚರ್ಚೆ ನಡೆಯಲಿದೆ. ದೆಹಲಿಯಲ್ಲಿ ನಾನು ಕೆಲವು ಮುಖಂಡರನ್ನು ಭೇಟಿಯಾಗಿದ್ದೇನೆ. ಸಭೆಗೆ ನಾಲ್ಕೈದು ಜನ ಪ್ರಮುಖರು ಹಾಜರಿರಲಿಲ್ಲ. ರಾಜೀನಾಮೆ ಇತ್ಯರ್ಥವಾದ ನಂತರ ಮತ್ತಷ್ಟು ಪ್ರಬಲವಾಗಿ ಪ್ರತಿಪಕ್ಷ ಕೆಲಸ ಮಾಡಲಿದೆ. ಸಂಘಟನೆ ಮಾಡಿ ಮುಂಬರುವ ಜಿ.ಪಂ. ಗ್ರಾ.ಪಂ ಚುನಾವಣೆಯಲ್ಲಿ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ಇರಬೇಕು. ಇಂಥಹ ಸಮರ್ಥ ವ್ಯಕ್ತಿಯನ್ನು ಹೈಕಮಾಂಡ್ ಹುಡುಕುತ್ತಿದೆ ಎಂದು ಹೇಳಿದರು.
"ನಾನು ಜೀವಂತ ಇರುವವರೆಗೆ ಯಮಕನಮರಡಿಯಲ್ಲಿ ನಾನೇ ಶಾಸಕ. ಸೋಲು ಮತ್ತು ಗೆಲುವಿನ ಭಯ ಯಾವುದೂ ಇಲ್ಲ. ಮುಂದಿನ ಬಾರಿ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇನೆ ಎನ್ನುವ ರಮೇಶ ಆಸೆ ಈಡೇರಲ್ಲ. ನಾನು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅನುಯಾಯಿ. ನಾನು ಯಾರಿಗೂ ಹೆದರುವ ವ್ಯಕ್ತಿ ಅಲ್ಲವೇ ಅಲ್ಲ" ಎಂದು ಹೇಳಿದ್ದಾರೆ.