ಮಡಿಕೇರಿ, ಜ 6 (Daijiworld News/MB) : ಗರ್ಭಿಣಿಯಾಗಿದ್ದ ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಅಕ್ರಮವಾಗಿ ಹೆರಿಗೆ ಮಾಡಿಸಿದಲ್ಲದೇ, ಆಕೆಗೆ ಜನಿಸಿದ ಗಂಡು ಮಗುವನ್ನು 1.50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದಡಿ ಮಡಿಕೇರಿ ನಗರದ ವೈದ್ಯ ದಂಪತಿ ಸೇರಿದಂತೆ 6 ಮಂದಿಯ ವಿರುದ್ದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಟಿ.ಎಸ್. ಅರುಂಧತಿ ಅವರು ನೀಡಿದ ದೂರನ್ನು ಆಧರಿಸಿ ಆರೋಪಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳು ಪ್ರಸ್ತುತ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
2019ರ ಡಿಸೆಂಬರ್ 22ರಂದು ಬಾಲಕಿಯೊಬ್ಬಳು ತನ್ನ ತಾಯಿಯೊಂದಿಗೆ ದಂಪತಿ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ವೈದ್ಯ ದಂಪತಿಗಳು ಆಸ್ಪತ್ರೆಯ ಸಿಬ್ಬಂದಿಗಳ ಸಹಾಯದೊಂದಿಗೆ ಬಾಲಕಿಗೆ ಅಕ್ರಮವಾಗಿ ಹೆರಿಗೆ ಮಾಡಿಸಿದ್ದು ಹೆರಿಗೆಯಾದ ಬಳಿಕ ಬಾಲಕಿ ತನಗೆ ಮಗು ಬೇಡವೆಂದು ಹೇಳಿದಾಗ ಆಕೆಗೆ ಜನಿಸಿದ ಗಂಡು ಮಗುವನ್ನು ಅದೇ ಆಸ್ಪತ್ರೆಯ ಡಿ-ಗ್ರೂಪ್ ನೌಕರರೊಬ್ಬರಿಗೆ 1.50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು ಎಂದು ಆರೋಪ ಮಾಡಲಾಗಿದೆ.
ಈ ಪ್ರಕರಣದ ಬಗ್ಗೆ ಮಾಹಿತಿ ದೊರೆತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಟಿ.ಎಸ್. ಅರುಂಧತಿ ಅವರು ಡಿಸೆಂಬರ್ 27ರಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಕರಣವನ್ನು ತನಿಖೆ ಮಾಡುವಂತೆ ಸೂಚಿಸಿದ್ದರು.
ಬಾಲಕಿಗೆ ಹೆರಿಗೆ ಮಾಡಿಸಿರುವುದು, ಬಳಿಕ ಮಗುವನ್ನು ಹಣಕ್ಕೆ ಮಾರಾಟ ಮಾಡಿರುವುದು, ದಾಖಲೆಗಳನ್ನು ತಿದ್ದಿರುವ ರಹಸ್ಯಗಳು ಬಯಲಾದ ಹಿನ್ನೆಲೆ ಉಪ ನಿರ್ದೇಶಕಿ ಅರುಂಧತಿ ಅವರು 2020ರ ಜನವರಿ 3ರಂದು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು.
ಇದೀಗ ನಗರ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.