ಬೆಂಗಳೂರು, ಜ 06 (Daijiworld News/MSP): ಹೊಸವರ್ಷದಂದು ಕಳ್ಳತನಕ್ಕೆ ಯತ್ನಿಸಿ ಕೊನೆಗೆ ತಪ್ಪಿಸಿಕೊಳ್ಳಲಾಗದೆ ಪೀಕಲಾಟಕ್ಕೆ ಸಿಲುಕಿ ಆತ್ಮಹತ್ಯೆಯೇ ಯತ್ನಿಸಿ ಸಿಕ್ಕಿಬಿದ್ದು ಆಸ್ಪತ್ರೆ ಪಾಲಾಗಿರುವ ಘಟನೆ ಬೆಂಗಳೂರಿನ ವಿಭೂತಿಪುರದಲ್ಲಿ ನಡೆದಿದೆ.
ಜನವರಿ 1ರಂದು ವಿಭೂತಿನಗರದ ನಿವಾಸಿ ಮೋಹನ್ ಅವರ ಮನೆಗೆ ಕನ್ನ ಹಾಕಿದ್ದು, ಆರೋಪಿಯನ್ನು ಸ್ಥಳೀಯ ನಿವಾಸಿ ಸ್ವಸ್ತಿಕ್(27) ಎಂದು ಗುರುತಿಸಲಾಗಿದೆ.
ಮನೆಮಾಲೀಕ ಮೋಹನ್ ಅವರು ಕಟ್ಟಡ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಹೊಸವರ್ಷದಂದು ಮುಂಜಾನೆಯೇ ಮನೆಯಿಂದ ಹೊರಹೋಗಿದ್ದರು. ಈ ವೇಳೆ ಮೋಹನ್ ಅವರ ಪತ್ನಿ ಮನೆಯ ಹೊರಗಿನ ಆವರಣ ಸ್ವಚ್ಚಗೊಳಿಸುತ್ತಿದ್ದು. ಇದೇ ವೇಳೆ ಕನ್ನ ಹಾಕಲು ಸರಿಯಾದ ಸಂದರ್ಭ ಎಂದು ಸ್ವಸ್ತಿಕ್ ಮನೆಗೆ ನುಗ್ಗಿದ್ದಾನೆ. ಆದರೆ ಈ ಸಂದರ್ಭ ಮನೆಗೆ ಹಿಂದಿರುಗಿದ ಮನೆಮಾಲೀಕ ಮೋಹನ್ ತನ್ನ ಪತ್ನಿ ಸಮೇತ ಮನೆಗೆ ಬೀಗ ಹಾಕಿ ದೇವಸ್ಥಾನಕ್ಕೆ ತೆರಳಿದ್ದಾರೆ.
ಬೆಲೆಬಾಳುವ ವಸ್ತು ಎಗರಿಸಿ ಮನೆಯಿಂದ ಹೊರಬರುವ ಪ್ಲ್ಯಾನ್ ಹಾಕಿಕೊಂಡಿದ್ದ ಸ್ವಸ್ತಿಕ್ ಗೆ ಮನೆಗೆ ಬೀಗ ಜಡಿದುದರಿಂದ ಚಿಂತೆಗೀಡಾಗಿದ್ದಾನೆ. ಹೊರಬರಲು ದಾರಿ ಕಾಣದೆ, ತಾನಿನ್ನು ಸಿಕ್ಕಿಬೀಳುವುದು ಖಚಿತ ಎಂಬ ಭಯದಲ್ಲಿ ಫ್ಯಾನ್ ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗದದಾಗ ಅಡುಗೆ ಮನೆಗೆ ಬಂದು ಗ್ಯಾಸ್ ಸೋರಿಕೆ ಮಾಡಿ, ದಿಂಬು, ಬೆಡ್ ಶೀಟ್ ತಂದು ಬೆಂಕಿ ಹಚ್ಚಿಕೊಂಡಿದ್ದಾನೆ.
ಮೋಹನ್ ಕುಟುಂಬ ಮನೆಗೆ ಬಂದ ತಕ್ಷಣ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಈ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಮನೆಗೆ ಸ್ವಸ್ತಿಕ್ ನುಗ್ಗಿರುವುದು ಖಚಿತವಾಗಿದೆ. ಬೆಂಕಿ ಹಚ್ಚಿಕೊಂಡ ಪರಿಣಾಮ ಸ್ವಸ್ತಿಕ್ ದೇಹ ಶೇ.20 ರಷ್ಟು ಸುಟ್ಟುಹೋಗಿದೆ.
"ಮನೆಯ ಬಾಗಿಲು ತೆರೆದಿದ್ದ ಕಾರಣ ಯಾವುದೋ ಒಂದು ವಸ್ತುವನ್ನು ಕದ್ದೊಯ್ಯೊಬೇಕು ಎಂದು ಪ್ರಯತ್ನಿಸಿದೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಸಿಕ್ಕಿಬೀಳುವ ಭಯದಲ್ಲಿ ಈ ರೀತಿ ಮಾಡಿಕೊಂಡೆ ನನಗೆ ದಯವಿಟ್ಟು ಹೊಡಿಯಬೇಡಿ ಎಂದು ಗೋಗರೆದಿದ್ದಾನೆ.
ಸ್ವಸ್ತಿಕ್’ನನ್ನು ಆಸ್ಪತ್ರೆಗೆ ದಾಖಲಿಸಿ, ಬಳಿಕ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.