ಬೆಂಗಳೂರು, ಜ 6 (Daijiworld News/MB) : ಈ ವರ್ಷದ ಮೊದಲ ಚಂದ್ರಗ್ರಹಣ ಜ.10ರಂದು ಉಂಟಾಗಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗಲಿದ್ದು ಜನರಲ್ಲಿ ಕುತೂಹಲ ಮೂಡಿಸಿದೆ. ಸುಮಾರು ನಾಲ್ಕು ಗಂಟೆ ಐದು ನಿಮಿಷದ ಅವಧಿಯವರೆಗೆ ಚಂದ್ರಗ್ರಹಣವು ಕಾಣಲಿದೆ.
ಭಾರತದಲ್ಲಿ ಚಂದ್ರಗ್ರಹಣವು ರಾತ್ರಿ 10.37ರಿಂದ ನಸುಕಿನ 2.42ರವರೆಗೂ ಸಂಭವಿಸಲಿದ್ದು ಚಂದ್ರಗ್ರಹಣದ ವೇಳೆ ಚಂದ್ರನ ಮೇಲ್ಮೈನ ಶೇ 90ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರವಾಗಲಿದೆ ಎಂದು ವರದಿಯಾಗಿದೆ.
ಈ ವರ್ಷದ ಮೊದಲ ಚಂದ್ರಗ್ರಹಣವು ಭಾರತದ ಎಲ್ಲಾ ನಗರದಲ್ಲಿಯೂ ಗೋಚರವಾಗಲಿದ್ದು ಈ ಅಪರೂಪದ ವಿದ್ಯಮಾನ ಅಮೆರಿಕದಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಅಲ್ಲಿ ಹಗಲು ಇರುವ ಸಂದರ್ಭದಲ್ಲಿ ಚಂದ್ರಗ್ರಹಣ ಉಂಟಾಗಲಿದೆ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳಲ್ಲಿನ ದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದ್ದು ಈ ಖಂಡಗಳು ಮಾತ್ರವಲ್ಲದೇ ಆಸ್ಟ್ರೇಲಿಯಾದಲ್ಲೂ ಚಂದ್ರಗ್ರಹಣ ಕಾಣಿಸಲಿದೆ. ಭಾರತದಲ್ಲಿ ಬಹುತೇಕ ಎಲ್ಲಾ ನಗರದಲ್ಲಿಯೂ ಗ್ರಹಣವನ್ನು ನೋಡ ಬಹುದಾಗಿದೆ.
ಈ ಗ್ರಹಣಕ್ಕೆ ಸಂಬಂಧಿಸಿ ಹಲವರಲ್ಲಿ ಕುತೂಹಲವಿದ್ದರೆ ಇನ್ನೂ ಹಲವರಲ್ಲಿ ಭಯ ಮೂಡಿದೆ. ಆದರೆ ಸೂರ್ಯಗ್ರಹಣದಂತೆ ಚಂದ್ರಗ್ರಹಣ ಅಪಾಯಕಾರಿಯಾದುದಲ್ಲ. ಇದನ್ನು ನಾವು ಬರಿಗಣ್ಣಿನಿಂದ ವೀಕ್ಷಿಸಬಹುದು. ಇನ್ನು ಇದೇ ರೀತಿಯ ಅರೆನೆರಳಿನ ಚಂದ್ರಗ್ರಹಣಗಳು ಈ ವರ್ಷ ಜೂನ್ 5, ಜುಲೈ 5 ಮತ್ತು ನವೆಂಬರ್ 30ರಂದು ಸಂಭವಿಸಲಿದೆ.