ಬೆಂಗಳೂರು, ಜ 6 (Daijiworld News/MB) : ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆದ ಕಾರಣ ಸರಣಿ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, 10ಕ್ಕೂ ಅಧಿಕ ಮಂದಿ ಗಂಭಿರವಾಗಿ ಗಾಯಗೊಂಡಿರುವ ಘಟನೆ ನಗರದ ಕೊಟ್ಟಿಗೆಪಾಳ್ಯ ಸಿಗ್ನಲ್ ಬಳಿ ಸೋಮವಾರ ನಡೆದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಘಟನೆಯಿಂದ ಹಲವು ವಾಹನಗಳೂ ಕೂಡಾ ಜಖಂ ಆಗಿದೆ ಎಂದು ವರದಿಯಾಗಿದೆ.
ಬಿಎಂಟಿಸಿ ಬಸ್ ಕೊಟ್ಟಿಗೆ ಪಾಳ್ಯ ಜಂಕ್ಷನ್ ಬಳಿಯಿರುವ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಬ್ರೇಕ್ ಫೇಲ್ ಆಗಿದ್ದು ನಿಯಂತ್ರಣ ತಪ್ಪಿ, ಮುಂದೆ ಸಾಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಈ ಡಿಕ್ಕಿಯ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು 10ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಬಸ್ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ವರೆಗೂ ಚಲಿಸಿದ್ದು ರಸ್ತೆಯ ಎಡಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದುದ್ದನ್ನು ಗಮನಿಸಿದ ಚಾಲಕ ಬಸ್ಅನ್ನು ಅಲ್ಲಿಗೆ ತಿರುಗಿಸಿದ್ದು ಬಸ್ ಸ್ಥಳದಲ್ಲಿದ್ದ ಮಣ್ಣಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತಿದೆ. ರಸ್ತೆಯ ಬಳಿಯಲ್ಲೇ ದೇವಾಲಯವಿದ್ದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನೂರಾರು ಜನರು ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಒಂದು ವೇಳೆ ಬಸ್ ದೇವಾಲಯಕ್ಕೆ ನುಗ್ಗಿದ್ದರೆ ಹಲವು ಜನರ ಜೀವಕ್ಕೆ ಹಾನಿಯಾಗುತ್ತಿತ್ತು. ಹೀಗಾಗಿ ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅವಘಡ ತಪ್ಪಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಭೇಟಿ ನೀಡಿದ್ದಾರೆ.