ನವದೆಹಲಿ, ಜ.06 (Daijiworld News/PY) : ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ವೇಳೆ ಮುಸುಕುಧಾರಿ ಗುಂಪಿನ ಥಳಿತದಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ಸಿಗಲಿಲ್ಲ ಎಂದು ಬೇಸರಗೊಂಡ ಜವಾಹರಲಾಲ್ ನೆಹರು ವಿವಿಯ ಸಾಬರ್ಮತಿ ವಿದ್ಯಾರ್ಥಿ ನಿಲಯದ ಹಿರಿಯ ವಾರ್ಡನ್ ಆರ್.ಮೀನಾ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿ ವಿಭಾಗಕ್ಕೆ ಕೈಬರಹದಲ್ಲಿ ಬರೆದ ಪತ್ರವನ್ನು ನೀಡಿರುವ ವಾರ್ಡನ್, ವಿದ್ಯಾರ್ಥಿಗಳ ರಕ್ಷಣೆ ಮಾಡಲು ಸಾಕಷ್ಟು ಪ್ರಯತ್ನ ಪಟ್ಟೆ, ಆದರೆ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾರೆ.
ಸಾಬರ್ಮತಿಯು ಜೆಎನ್ಯು ಕ್ಯಾಂಪಸ್ನಲ್ಲಿರುವ ಪ್ರಮುಖ ವಿದ್ಯಾರ್ಥಿ ನಿಲಯವಾಗಿದ್ದು, ಈ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 400 ವಿದ್ಯಾರ್ಥಿಗಳಿದ್ದಾರೆ.
ಹಿಂಸಾಚಾರದ ವೇಳೆ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ದಾಳಿ ನಡೆಸಿದ ಮುಸುಕುಧಾರಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇಬ್ಬರು ವಿದ್ಯಾರ್ಥಿಗಳು ಮೊದಲನೇಯ ಮಹಡಿಯಿಂದ ಹಾರಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಸುಮಾರು ಮೂರು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಮುಸುಕುಧಾರಿಗಳು ವಿವಿ ಆವರಣದಲ್ಲಿ ಕಂಡಕಂಡವರ ಮೇಲೆ ಕಬ್ಬಿಣದ ರಾಡ್ ಹಾಗೂ ಕೋಲುಗಳಿಂದ ದಾಳಿನಡೆಸುತ್ತಿದ್ದರು ಹಾಗೂ ಬಾಟಲ್ಗಳನ್ನು ಎಸೆಯುತ್ತಿದ್ದರು.
ಮುಸುಕುಧಾರಿಗಳ ಗುಂಪು ವಿದ್ಯಾರ್ಥಿನಿಲಯದಿಂದ ಇನ್ನೊಂದು ವಿದ್ಯಾರ್ಥಿನಿಲಯಕ್ಕೆ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಹಾಗೂ ಶಿಕ್ಷಕರ ಮೇಲೆ ದಾಳಿ ನಡೆಸಿದ ಪರಿಣಾಮ ಸುಮಾರು 35 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.