ಹೊಸದಿಲ್ಲಿ, ಜ.06 (Daijiworld News/PY) : ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯ ದಿನ ನಿಗದಿಯಾಗಿದ್ದು, ಫೆ.8ಕ್ಕೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಸೋಮವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮುಖ್ಯ ಚುನಾವಣಾಧಿಕಾರಿ ಸುನೀಲ್ ಅರೋರಾ ಅವರು, ಫೆ.8ಕ್ಕೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ, ಫೆ.11ರಂದು ಮತ ಎಣಿಕೆ ಆಗಲಿದೆ, ಇವತ್ತಿನಿಂದಲೇ ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದರು.
ಜ.21ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜ.22ರಂದು ನಾಮಪತ್ರ ಸಲ್ಲಿಕೆಯಾಗಲಿದೆ. ಜ.24ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ದೆಹಲಿಯಲ್ಲಿ ಒಟ್ಟು 1,46,92,136 ಮತದಾರರಿದ್ದು, 13,750 ಮತಗಟ್ಟೆಗಳಲ್ಲಿ ಮತದಾನವಾಗಲಿದೆ. ಮಾಧ್ಯಮ ಮೇಲ್ವಿಚಾರಣೆ ವಿಭಾಗವನ್ನು ತೆರೆಯಲಾಗುತ್ತದೆ. ದೆಹಲಿ ಚುನಾವಣಾ ಪ್ರಕ್ರಿಯೆಗೆ ಒಟ್ಟು 90 ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು. ಚುನಾವಣೆಯ ವೇಳಾಪಟ್ಟಿ ಅಂತಿಮಗೊಳಿಸುವ ಮುನ್ನ ಮೂವರು ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಸುನೀಲ್ ಅರೋರಾ ಅವರು ತಿಳಿಸಿದ್ದಾರೆ.
70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಸದ್ಯಕ್ಕೆ 67 ಸ್ಥಾನಗಳನ್ನು ಗೆದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಆಡಳಿತ ನಡೆಸುತ್ತಿದೆ.