ಬೆಂಗಳೂರು, ಜ.06 (Daijiworld News/PY) : ವಿದೇಶಕ್ಕೆ ಹೋಗುವ ಮೊದಲು ಸಂಪುಟ ವಿಸ್ತರಣೆ ಮಾಡುವ ಆಕಾಂಕ್ಷೆಯಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ ಅವರು, ವಿದೇಶಕ್ಕೆ ಹೋಗುವ ಮೊದಲು ಸಂಪುಟ ವಿಸ್ತರಣೆ ಮಾಡುವ ಅಪೇಕ್ಷೆ ಇದೆ, ಜ.16-18ಕ್ಕೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅದಕ್ಕೂ ಮೊದಲು ನಾನು ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಟರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.
ಸ್ವಿಡ್ಜರ್ಲಾಂಡ್ನ ದಾವೋಸ್ನಲ್ಲಿ ನಡೆಯುವ ಆರ್ಥಿಕ ಶೃಂಗ ಸಭೆಗೆ ಹೋಗುವ ಅನಿವಾರ್ಯತೆ ಇರುವ ಕಾರಣ ಹೋಗುತ್ತಿದ್ದೇನೆ. ದಾವೋಸ್ಗೆ ತೆರಳುವ ಮೊದಲು ಸಂಪುಟ ವಿಸ್ತರಣೆ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
3-4 ದಿನಗಳಲ್ಲಿ ದೆಹಲಿಎ ತೆರಳಲಿದ್ದು, ಜಲಶಕ್ತಿ ಸಚಿವರ ಜೊತೆ ಮಹದಾಯಿ ನ್ಯಾಯಾಧಿಕರಣ ಅಧಿಸೂಚನೆ ಪ್ರಕಟದ ಬಗ್ಗೆ ಚರ್ಚೆ ಮಾಡಲಿದ್ದೇನೆ, ಈ ವಿಚಾರವಾಗಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಅಗತ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ. ಹಾಗೆಯೇ ಗೋವಾ, ಮಹಾರಾಷ್ಟ್ರ ಸರ್ಕಾರದ ಜೊತೆಯೂ ಮಾತನಾಡಿ ಎಂದು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡುವುದಾಗಿ ಹೇಳಿದರು.