ನವದೆಹಲಿ, ಜ 06 (DaijiworldNews/SM): ದೆಹಲಿಯ ಜವಹಾರ್ ಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಕುರಿತು ತನಿಖೆಗೆ ದೆಹಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ.
ವಿವಿ ಆವರಣದೊಳಗೆ ನುಗ್ಗಿದ್ದ 50 ಮಂದಿ ಮುಸುಕುಧಾರಿಗಳ ತಂಡ ಹಾಸ್ಟೆಲ್ ನಲ್ಲಿ ದಾಂಧಲೆ ನಡೆಸಿತ್ತು. ಹಾಗೂ ಅಲ್ಲಿದ್ದ ವಿದ್ಯಾರ್ಥಿಗಳಿಗೆ ಮನ ಬಂದಂತೆ ಥಳಿಸಿತ್ತು. ರಾಷ್ಟ್ರವ್ಯಾಪಿ ಈ ಘಟನೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಹಾಗೂ ವಿಚಾರಣೆ ವಿಳಂಬವಾಗಬಾರದೆಂಬ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಮಗೆ ಪ್ರಮುಖ ಸುಳಿವುಗಳು ಸಿಕ್ಕಿವೆ. ಹೀಗಾಗಿ ಶೀಘ್ರದಲ್ಲೇ ಪ್ರಕರಣವನ್ನು ಬೇಧಿಸಲಾಗುವುದು ಎಂದು ದೆಹಲಿ ಪೊಲೀಸ್ ಪಿಆರ್ ಒ ತಿಳಿಸಿದ್ದಾರೆ.
ಇನ್ನು ಹಿಂಸಾಚಾರ ನಡೆಸಲು ಮಾಸ್ಕ್ ಧರಿಸಿಕೊಂಡು ಕಟ್ಟಡದೊಳಗೆ ಪ್ರವೇಶಿಸಿದವರನ್ನು ತಡೆಯುವ ಪ್ರಯತ್ನವನ್ನು ಪೊಲೀಸರು ನಡೆಸಿಲ್ಲ. ಇದೇ ಕಾರಣಕ್ಕೆ ಇಷ್ಟೊಂದು ಹಲ್ಲೆ, ದಾಂಧಲೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಪಿಆರ್ ಒ ಆಡಳಿತ ಕಟ್ಟಡದಿಂದ ತುಂಬಾ ದೂರದಲ್ಲಿ ಘಟನೆ ನಡೆದಿರುವ ಕಾರಣ ನಿಯಂತ್ರಿಸಲು ಅಸಾಧ್ಯವಾಗಿದೆ ಎಂದಿದ್ದಾರೆ.