ನವದೆಹಲಿ, ಜ 7 (Daijiworld News/MB) : ಜೆಎನ್ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೇಲೆ ಮಾಸ್ಕ್ ಹಾಕಿದ ತಂಡವೊಂದು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹಲವೆಡೆ ತೀವ್ರ ಖಂಡನೆ ವ್ಯಕ್ತವಾಗಿದ್ದು ಪ್ರತಿಭಟನೆಗಳು ನಡೆಯುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ತೀವ್ರ ಖಂಡಡನೆ ವ್ಯಕ್ತವಾಗುತ್ತಿದ್ದು ಈವರೆಗೂ ಯಾರ ಬಂಧನವೂ ಆಗಿಲ್ಲ. ಆದರೆ ಪೊಲೀಸರಿಗೆ ಮಹುತ್ವದ ಮಾಹಿತಿ ದೊರಕಿದೆ ಎಂದು ವರದಿಯಾಗಿದೆ. ಸೋಮವಾರ ಈ ಪ್ರಕರಣದ ತನಿಖೆ ಹಾಗೂ ವಿಚಾರಣೆ ವಿಳಂಬವಾಗಬಾರದೆಂಬ ನಿಟ್ಟಿನಲ್ಲಿ ದೆಹಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ.
ಈ ಘಟನೆಯನ್ನು ಖಂಡಿಸಿ ರಾಜಕೀಯಕ ಪಕ್ಷಗಳು, ಜನತೆ ಹಾಗೂ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ದಾಳಿ ನಡೆಸಿದ ದುಷ್ಕರ್ಮಿಗಳ ಬಂಧನವಾಗಬೇಕು, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದಾಳಿಕೋರರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಗಂಭೀರ ಗಾಯಗೊಂಡಿದ್ದ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, "ಕಬ್ಬಿಣದ ಸರಳುಗಳಿಂದ ಸುಮಾರು 20-25 ದಾಳಿಕೋರರು ಹೊಡೆದರು, ಅವರು ನನಗೆ ಹೊಡೆದು ಸಾಯಿಸಿಯೇ ಬಿಡುತ್ತಿದ್ದರು. ಬದುಕಿದ್ದೇ ಹೆಚ್ಚು ಎಂದು ಹೇಳಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳಲ್ಲಿ ಈ ಘಟನೆಗೆ ಸಂಬಂಧಿಸಿದ ಮಾಹಿತಿ ಪಡೆದಿದ್ದು ಈ ಸಂದರ್ಭದಲ್ಲಿ ವಿವಿ ಕುಲಪತಿ ಜಗದೀಶ್ ಕುಮಾರ್ ಗೈರು ಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ಜಗದೀಶ್ ಕುಮಾರ್ ವಜಾ ಮಾಡುವಂತೆ ಶಿಕ್ಷಕರ ಸಂಘ ಮತ್ತು ಜೆಎನ್ಯುಎಸ್ಯು ಆಗ್ರಹ ಮಾಡಿದೆ.