ನವದೆಹಲಿ, ಜ 7(Daijiworld News/MSP): ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ವಿಚಾರದ ಬಗ್ಗೆ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಜ.13ರಿಂದ ವಿಚಾರಣೆ ನಡೆಸಲಿದೆ.
ಶಬರಿಮಲೆ ದೇವಸ್ಥಾನಕ್ಕೆ 10 ರಿಂದ 50 ವರ್ಷದ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿಷೇಧವನ್ನು ಅಸಿಂಧುಗೊಳಿಸಿ ಸುಪ್ರಿಂಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿ ವಿಚಾರಣೆಯನ್ನು ಸರ್ವೋನ್ನತ ನ್ಯಾಯಾಲಯದ ಸಾಂವಿಧಾನಿಕ ಪೀಠ ನಡೆಸಿಕೊಡಲಿದೆ.
ಜತೆಗೆ ಮಸೀದಿಗಳಿಗೆ ಮಹಿಳೆಯರ ಪ್ರವೇಶ, ಸಮುದಾಯದಿಂದ ಹೊರಗಿನವರನ್ನು ಮದುವೆಯಾದ ಪಾರ್ಸಿ ಮಹಿಳೆಯರಿಗೆ ಅಗ್ನಿ ದೇವಾಲಯ ನಿಷೇಧ ಮತ್ತು ದಾವೂದಿ ಬ್ರೊಹ್ರಾ ಸಮುದಾಯದ ಹೆಣ್ಣುಮಕ್ಕಳ ಜನನಾಂಗ ಛೇಧನ ವಿಚಾರ ಮುಂತಾಡ ಮಹಿಳೆಯರ ವಿರುದ್ಧ ತಾರತಮ್ಯ ಅಂಶಗಳ ಬಗ್ಗೆ ಕೂಡ ಪರಿಶೀಲನೆ ನಡೆಸಲಿದೆ.
ಈ ಬಗ್ಗೆ ಭಾರತೀಯ ಯುವ ವಕೀಲರ ಅಸೋಸಿ ಯೇಶನ್ 2018ರ ತೀರ್ಪು ಮರು ವಿಮರ್ಶೆಯಾಗಬೇಕೆಂದು ನ್ಯಾಯಾಲಯದಲ್ಲಿ ಅರಿಕೆ ಮಾಡಿಕೊಂಡಿದ್ದರಿಂದ ಹಾಗೂ ಈ ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ವಹಿಸಬೇಕು ಎಂದು ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೋಮವಾರ ಹೊಸ ಪೀಠ ರಚಿಸಿ ಆದೇಶ ಹೊರಡಿಸಿದೆ.