ಬೆಂಗಳೂರು, ಜ 7 (Daijiworld News/MB) : ಕೇಂದ್ರ ಸರಕಾರದ ಕಾರ್ಮಿಕ ಕಾನೂನುಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್ಗೆ ಕರೆ ನೀಡಿದ್ದು ದೇಶವ್ಯಾಪ್ತಿ ಮುಷ್ಕರಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದೆ. ಈ ಬಂದ್ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಸಹಿತ ಕೆಲವು ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದ್ದು ಹಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಕಡಿಮೆ. ಆದರೂ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ನಾಳೆ ರಾಜ್ಯದಲ್ಲಿ ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ ಮಳಿಗೆ, ಆ್ಯಂಬುಲೆನ್ಸ್ ಸೇವೆ ಗಳನ್ನು ಹೊರತುಪಡಿಸಿ ಉತ್ಪಾದನ ವಿಭಾಗ, ಅಸಂಘಟಿತ ಕಾರ್ಮಿಕ ವಲಯಗಳ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಈ ಮುಷ್ಕರಕ್ಕೆ ಕೆಎಸ್ಆರ್ಟಿಸಿ ನೌಕರರ ಸಂಘ ಮತ್ತು ಒಕ್ಕೂಟ, ಆಟೋ ಡ್ರೈವರ್ಸ್ ಯೂನಿಯನ್, ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ ನೈತಿಕ ಬೆಂಬಲ ಸೂಚಿಸಿದ್ದು, "ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ಎಂದಿನಂತೆ ಸೇವೆ ನೀಡಲಿದೆ. ಸಿಬ್ಬಂದಿಗಳು ಈ ಮುಷ್ಕರದಲ್ಲಿ ಪಾಲ್ಗೊಂಡರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು" ಎಂದು ಸಂಸ್ಥೆ ಎಚ್ಚರ ನೀಡಿದೆ.
ಬೆಂಬಲ ಸೂಚಿಸಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಬಸ್ ಸೇವೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುಷ್ಕರ ನಡೆಸಲು ತೀರ್ಮಾನ ಮಾಡಿದೆ.
ಈ ಮುಷ್ಕರದ ಕುರಿತು ಮಾತನಾಡಿದ ಸಿಐಟಿಯು ರಾಜ್ಯ ಮುಖ್ಯಸ್ಥೆ ವರಲಕ್ಷ್ಮೀ, "ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನಾಲ್ಕು ತಿಂಗಳ ಹಿಂದೆಯೇ ಈ ಹೋರಾಟದ ಕುರಿತು ತಿಳಿಸಿದ್ದೆವು. ಆದರೆ ಈಗ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನೆ ರ್ಯಾಲಿಯನ್ನು ನಡೆಸಲು ಅನುಮತಿ ನೀಡದ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಮೂಹಿಕ ಮುಷ್ಕರ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
"ಕಾರ್ಮಿಕ ಸಂಘಟನೆಗಳು ಮಾಡಲಿರುವ ಈ ಮುಷ್ಕರದ ರ್ಯಾಲಿಗೆ ಅನುಮತಿ ನೀಡಿಲ್ಲ. ಬೆಂಗಳೂರು ನಗರಲದಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮೆರವಣಿಗೆಗೆ ಅವಕಾಶವನ್ನು ನೀಡಿಲ್ಲ. ಆದರೂ ಮೆರವಣಿಗೆ ನಡೆಸಿದರೆ ಆಯೋಜಕರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು" ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಈ ಬಂದ್ಗೆ ಸಿಐಟಿಯು, ಎಐಯುಟಿಸಿ, ಸೆಲ್ಫ್ ಎಂಪ್ಲಾಯ್ಡ ವುಮೆನ್ಸ್ ಅಸೋಸಿ ಯೇಶನ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ , ಹಿಂದೂ ಮಜ್ದೂರ್ ಸಭಾ, ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಬ್ಯಾಂಕ್ ನೌಕರರ ಸಂಘ ಸೇರಿ ಒಟ್ಟು ರಾಜ್ಯ ಹಾಗೂ ಕೇಂದ್ರದ ಸುಮಾರು 40ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು, 60ಕ್ಕೂ ಅಧಿಕ ರೈತ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಮುಷ್ಕರದಲ್ಲಿ ಬೆಂಬಲ ಸೂಚಿಸಿದ್ದು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ.
ಬ್ಯಾಂಕಿಂಗ್ ವಲಯದ ಹಲವಾರು ಕಾರ್ಮಿಕ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು ಈ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದರೆ ಆನ್ಲೈನ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
ಹಾಗೆಯೇ ದೇಶದಲ್ಲಿನ ಸುಮಾರು 175 ರೈತ ಮತ್ತು ಕೃಷಿ ಸಂಬಂಧಿತ ಕಾರ್ಮಿಕ ಸಂಘಟನೆಗಳು ಕೂಡಾ ಬುಧವಾರವೇ ಗ್ರಾಮೀಣ ಭಾರತ ಬಂದ್ಗೆ ಕರೆ ನೀಡಿದ್ದು ಈ ಮುಷ್ಕರಕ್ಕೂ ನಮ್ಮ ಬೆಂಬಲವಿದೆ ಎಂದು ಉಳಿದ ಸಂಘಟನೆಗಳು ತಿಳಿಸಿದೆ.
ನಾಳೆ ಮುಷ್ಕರವಿರುವ ಪರಿಣಾಮವಾಗಿ ಬ್ಯಾಂಕ್, ಅಂಚೆ ಕಚೇರಿ, ಎಲ್ಐಸಿ, ಎಪಿಎಂಸಿ ಮಾರುಕಟ್ಟೆ, ಖಾಸಗಿ ಬಸ್ಗಳ ಸೇವೆ, ಕೇಂದ್ರ ಸರಕಾರಿ ಸ್ವಾಮ್ಯದ ಕಚೇರಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸೇವೆಗಳು ಇರುವುದಿಲ್ಲ, ಆ್ಯಪ್ ಆಧಾರಿತ ಕ್ಯಾಬ್ಗಳು, ಕೆಎಸ್ಆರ್ಟಿಸಿ, ಬಿಎಂಟಿಸಿ, ಹಾಲು, ಪೇಪರ್, ಆಟೋ ಸೇವೆಗಳು ದೊರೆಯಲಿದ್ದು ಸದ್ಯದ ಮಟ್ಟಿಗೆ ಶಾಲಾ ಕಾಲೇಜುಗಳು ಎಂದಿನಂತೆ ಇರಲಿವೆ.