ನವದೆಹಲಿ, ಜ 7 (Daijiworld News/MB) : ಜೆಎನ್ಯು ವಿದ್ಯಾರ್ಥಿ ನಾಯಕಿ ಐಶೆ ಘೋಷ್ ಮತ್ತು ಇತರ 19 ಮಂದಿಯ ಮೇಲೆ ಜೆಎನ್ಯುನ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಸರ್ವರ್ ಕೊಠಡಿಯ ಧ್ವಂಸಗೊಳಿಸಿದ ಆರೋಪದ ಮೇಲೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಮುಸುಕುಧಾರಿಗಳು ಜೆಎನ್ಯು ಕ್ಯಾಂಪಸ್ನಲ್ಲಿ ಹಿಂಸಾಚಾರ ನಡೆಸಿದ ಮುನ್ನಾ ದಿನ, ಜನವರಿ 4 ರಂದು ವಿಶ್ವವಿದ್ಯಾನಿಲಯದ ಸರ್ವರ್ ಕೊಠಡಿಯಲ್ಲಿ ದಾಂದಳೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಜ.5 ರಂದು ವಿಶ್ವವಿದ್ಯಾನಿಲಯದ ಆವರಣ ಹಾಗೂ ಹಾಸ್ಟೆಲ್ಗಳನ್ನು ಪ್ರವೇಶ ಮಾಡಿದ ದುಷ್ಕರ್ಮಿಗಳು ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್ ಹಾಗೂ ಹಲವರ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆಯಿಂದಾಗಿ 34 ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರಿಗೂ ಗಾಯವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಿದವರ ಕೆಲವು ಪ್ರಮುಖ ಸುಳಿವುಗಳು ಲಭ್ಯವಾಗಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಮನ್ದೀಪ್ ಸಿಂಗ್ ರಾಂಧವ ತಿಳಿಸಿದ್ದಾರೆ.