ಬೆಂಗಳೂರು, ಜ 7(Daijiworld News/MSP): ಕೇಂದ್ರ ಸರ್ಕಾರವು ರಾಜ್ಯಕ್ಕೆ 2ನೇ ಕಂತಿನಲ್ಲಿ ನೆರೆ ಪರಿಹಾರ ಬಿಡುಗಡೆ ಮಾಡಿದ್ದು, ಈ ಹಿನ್ನಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಉಂಟಾಗಿದ್ದ ಭೀಕರ ನೆರೆ, ಪ್ರವಾಹದಿಂದ ಆದ ಹಾನಿಯಾದ ಹಿನ್ನಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ 1869.85 ಕೋಟಿ ರು. ಪರಿಹಾರ ಬಿಡುಗಡೆಗೊಳಿಸಿದೆ. ಅಕ್ಟೋಬರ್ ನಲ್ಲಿ ಕೇಂದ್ರದ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಂದ 1200 ಕೋಟಿ ರೂ. ಪರಿಹಾರ ಬಿಡುಗಡೆಯಾಗಿತ್ತು. ಜ.6 ರಂದು ಸಭೆಯಲ್ಲಿ ರಾಜ್ಯದ ನೆರೆ ಸಂತ್ರಸ್ಥರಿಗಾಗಿ 1869.85 ಕೋಟಿ ರೂ ನೀಡಲು ತೀರ್ಮಾನಿಸಲಾಗಿದ್ದು ಈ ಪಟ್ಟಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶದ ಒಟ್ಟೂ ಏಳು ರಾಜ್ಯಗಳಿಗೆ ಒಟ್ಟು 5908.56 ಕೋಟಿ ರೂ. ಪರಿಹಾರದ ಹಣ ಬಿಡುಗಡೆಯಾಗಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ನೆರೆ ಪರಿಹಾರ ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇದು ಎರಡನೇ ಹಂತದ ಪರಿಹಾರವಾಗಿದ್ದು ಕೇಂದ್ರ ಮತ್ತಷ್ಟು ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದಿದ್ದಾರೆ.