ನವದೆಹಲಿ, ಜ 7 (Daijiworld News/MB) : ಜವಹಾರ್ಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್ ಯು) ಮೇಲೆ ನಡೆದ ದಾಳಿಯ ಹೊಣೆಯನ್ನು ಹಿಂದೂ ರಕ್ಷಾ ದಳ್ ಎಂಬ ಹೆಸರಿನ ಸಂಘಟನೆ ಹೊತ್ತುಕೊಂಡಿದ್ದು ಸಂಘಟನೆಯ ನಾಯಕ ಎಂದು ಪರಿಚಯಿಸಿಕೊಂಡಿರುವ ಪಿಂಕಿ ಚೌಧರಿ ಎಂಬವರು ಮಂಗಳವಾರ ಈ ಕುರಿತು ಮಾತನಾಡಿರುವ ವಿಡಿಯೋವನ್ನು ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳ ಮೇಲೆ ಹಾಗೂ ಶಿಕ್ಷಕ್ಷರ ಮೇಲೆ ಹಲ್ಲೆ ನಡೆಸಿದವರು ನಮ್ಮವರು, ಜೆಎನ್ಯು ದೇಶ ವಿರೋಧಿ ಚಟುವಟಿಕೆ ನಡೆಸುವ ಕೇಂದ್ರವಾಗಿದೆ. ಅದನ್ನು ಸಹಿಸಲು ಸಾಧ್ಯವಿಲ್ಲ. ಜೆಎನ್ಯು ಮೇಲೆ ನಡೆದ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಜೆಎನ್ಯು ಮೇಲೆ ದಾಳಿ ನಡೆಸಿದವರು ನಮ್ಮ ಕಾರ್ಯಕರ್ತರು ಎಂದು ಚೌಧರಿ ಅವರು ವಿಡಿಯೋ ಮುಖೇನ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಅಧಿಕಾರಿಗಳು, "ಈ ಹೇಳಿಕೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ. ದೆಹಲಿ ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾವಹಿಸಿದ್ದಾರೆ. ಜೆಎನ್ಯುವಿನಲ್ಲಿ ಹಲ್ಲೆ ಮಾಡಿದವರ ಮುಖ ಗುರುತಿಸಲಾಗುತ್ತಿದೆ" ಎಂದು ಹೇಳಿದ್ದಾರೆಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಜೆಎನ್ಯುವಿನಲ್ಲಿ ನಡೆದ ದಾಳಿಗೆ ದೇಶವ್ಯಾಪ್ತಿ ಖಂಡನೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಎಬಿವಿಪಿ ಸಂಘಟನೆ ಈ ಕೃತ್ಯ ನಡೆಸಿದೆ ಎಂದು ಜೆಎನ್ಯುಎಸ್ಯು ಹೇಳಿದ್ದು ಪರಸ್ಪರ ದೋಷಾರೋಪ ಮಾಡಿದ್ದಾರೆ.