ಚಿತ್ರದುರ್ಗ, ಜ 7(Daijiworld News/MSP): ಅಂಗನವಾಡಿ ಕಾರ್ಯಕರ್ತೆಯರಿಗೆ ಬಯೋಮೆಟ್ರಿಕ್ ಹಾಜರಾತಿ ಹಾಗೂ ಅಂಗನವಾಡಿಗೆ ಬರುವ ಮಕ್ಕಳಿಗೆ ಫೇಸ್ ರೀಡಿಂಗ್ ಮೂಲಕ ಹಾಜರಾತಿಯನ್ನು ಕಡ್ಡಾಯಗೊಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅ.ಜೊಲ್ಲೆ ಹೇಳಿದರು.
ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯತಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿಗೆ ಸಣ್ಣ ಮಕ್ಕಳು ಬರುವುದರಿಂದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅಗತ್ಯವಿರುತ್ತದೆ. ಈಗಾಗಲೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಕೆಜಿ, ಯುಕೆಜಿ ಖಾಸಗಿ ಸಂಸ್ಥೆಗಳು ಪ್ರಾರಂಭಿಸಿದ್ದು, ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಕಾಯಕಲ್ಪ ಕೊಟ್ಟು ಅವುಗಳ ನಿರ್ವಹಣೆಯನ್ನು ಸುಧಾರಿಸುವ ಅಗತ್ಯವಿದೆ. ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪವೂ ಇದ್ದು, ಇದನ್ನು ಸುಧಾರಿಸಲು ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲ ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾಗಿ ಕಡ್ಡಾಯಗೊಳಿಸಲಾಗುವುದು. ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆಗೂ ರಿಜಿಸ್ಟರ್ ನಲ್ಲಿ ನಮೂದಿಸುವ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಮಕ್ಕಳ ಫೇಸ್ ರೀಡಿಂಗ್ ಹಾಜರಾತಿ ಕೈಗೊಳ್ಳಲಾಗುವುದು. ಅಂಗನವಾಡಿ ಮಕ್ಕಳಿಗೆ ಬಯೋಮೆಟ್ರಿಕ್ ಹಾಜರಾತಿ ಆಗುವುದಿಲ್ಲ. ಹಾಗಾಗಿ ಅವರಿಗೆ ಫೇಸ್ ರೀಡಿಂಗ್ ಮೂಲಕ ಪ್ರತಿ ದಿನ ಹಾಜರಾತಿ ಕೊಡುವ ಯೋಜನೆ ರೂಪಿಸಲಾಗುವುದು ಎಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆ ಕರ್ತವ್ಯ ಹೊರತು ಪಡಿಸಿ ಬೇರೆ ಬೇರೆ ಇಲಾಖೆಗಳ ಒತ್ತಡವಿದ್ದು, ಅಂತಹ ಒತ್ತಡವನ್ನು ಕಡಿಮೆ ಮಾಡುವ ಚಿಂತನೆ ಇದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆ ಪ್ರಾರಂಭವಾಗಿ ಎರಡು ವರ್ಷ ಕಳೆದಿದೆ. ರಾಜ್ಯದಲ್ಲಿ ಇನ್ನೂ ಚಾಲನೆ ದೊರೆತಿಲ್ಲ. ಈ ಯೋಜನೆ ಕಾರ್ಯರೂಪಕ್ಕೆ ತಂದು ಪೋಷಣ್ ಅಭಿಯಾನದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸ್ಮಾರ್ಟ್ ಫೋನ್ ನೀಡಲಾಗುವುದು. ಇದರಿಂದ ಅಂಗನವಾಡಿಗೆ ದಾಖಲಾದ ಮಗುವಿನ ಶಾರೀರಿಕ ಮತ್ತು ದೈಹಿಕ ಬೆಳವಣಿಗೆಯನ್ನು ಸ್ಮಾರ್ಟ್ ಫೋನ್ ಮೂಲಕ ಮಾಹಿತಿ ತಿಳಿಯುವ ವ್ಯವಸ್ಥೆ ಇದೆ. ಈಗಾಗಲೇ ಟೆಂಡರ್ ಹಂತ ಮುಗಿದಿದ್ದು. ಜನವರಿ 20 ರೊಳಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಇದರಿಂದ ಮಕ್ಕಳ ಆರೋಗ್ಯ ಬೆಳವಣಿಗೆಗೆ ನಾಂದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುದಾನ ಪಡೆದ ಅನೇಕ ಸಂಸ್ಥೆಗಳು, ಎನ್ಜಿಓಗಳು, ಅಂಧಮಕ್ಕಳು, ಬುದ್ಧಿಮಾಂಧ್ಯ ಮಕ್ಕಳ ಶಾಲೆಗಳು, ಬಾಲಕ ಮತ್ತು ಬಾಲಕಿಯರ ಮಂದಿರಗಳು, ನಿರ್ಗತಿಕರ ಕುಟೀರಗಳನ್ನು ನಡೆಸುತ್ತಿವೆ. ಸರ್ಕಾರದ ನಿಯಾವಳಿ ಪ್ರಕಾರ ಆ ಸಂಸ್ಥೆಗಳು ಬಯೋಮೆಟ್ರಿಕ್ ಮೂಲಕ ಹಾಜರಾತಿ ಕಳಿಸಬೇಕು. ಆದರೆ ಬಹಳಷ್ಟು ಇದನ್ನು ಪಾಲನೆ ಮಾಡುತ್ತಿಲ್ಲ. ಸುಳ್ಳು ದಾಖಲಾತಿ ನೀಡುವ ಸಂಸ್ಥೆಗಳ ವಿರುದ್ಧ ಕ್ರಮ ಆಗಬೇಕು. ಅದೇ ರೀತಿ ಪ್ರಾಮಾಣಿಕ ಸೇವೆ ಸಲ್ಲಿಸುವ ಎನ್ಜಿಓಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಮಾಡಬೇಕು ಎಂದರು.
ಇಲಾಖೆಯಿಂದ ಅನುದಾನ ಪಡೆದ ಸಂಸ್ಥೆಗಳು ತಪ್ಪುಗಳನ್ನು ಮಾಡಿದಾಗ ಇಲಾಖೆ ಅಧಿಕಾರಿಗಳು ಮೇಲ್ವಾಚಾರಣೆ ನಡೆಸಬೇಕು. ತಪ್ಪು ಮಾಡುವ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕು. ತಪ್ಪಿತಸ್ಥ ಸಂಸ್ಥೆಗಳು ಕಂಡು ಬಂದರೆ 15 ದಿನಗಳೊಗೆ ವರದಿ ಸಲ್ಲಿಸಬೇಕು. ಲಾಭ ಮಾಡಿಕೊಳ್ಳುವ ಸಂಸ್ಥೆಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಶೇ 60 ರಷ್ಟು ಸಿಬ್ಬಂದಿ ಕೊರತೆ ಇತ್ತು. ಈ ಸಿಬ್ಬಂದಿ ಕೊರತೆ ನಿವಾರಣಿ ಮಾಡಿದಾಗ ಮಾತ್ರ ಉತ್ತಮ ರೀತಿಯ ಕೆಲಸ ಮಾಡಲು ಸಾಧ್ಯ ಎಂದು ಅರಿತು 48 ಮಂದಿ ಸಿಡಿಪಿಓಗಳಿಗೆ ಹಾಗೂ 48 ಮಂದಿ ಎಸಿಟಿಪಿಓಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜತೆಗೆ 628 ಮಂದಿ ಸೂಪರ್ ವೈಜರ್ ಗಳ ತರಬೇತಿ ಅವಧಿ ಪೂರ್ಣಗೊಳ್ಳುತ್ತಿದ್ದು, ವಾರದೊಳಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು ಎಂದು ಹೇಳಿದರು.
ಇಲಾಖೆಯಲ್ಲಿ ಎಂಟು ವರ್ಷದಿಂದ ಪದೋನ್ನತಿ ಇರಲಿಲ್ಲ. ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಇದರಿಂದ ಶೇ 50 ರಷ್ಟು ಸಿಬ್ಬಂದಿ ಕೊರತೆ ಕಡಿಮೆಯಾಗಿದೆ ಎಂದರು.
ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.