ನವದೆಹಲಿ, ಜ 7(Daijiworld News/MSP): ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣದ ಅಪರಾಧಿಯೋರ್ವ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದ್ದು, ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಮಂಗಳವಾರ ಡೆತ್ ವಾರಂಟ್ ಜಾರಿ ಮಾಡಿದೆ. ಜನವರಿ 22ರ ಬುಧವಾರ ಬೆಳಗ್ಗೆ 7 ಗಂಟೆಗೆ ನಾಲ್ವರಿಗೂ ಮರಣದಂಡನೆ ಶಿಕ್ಷೆ ವಿಧಿಸಲು ಕೋರ್ಟ್ ಡೆತ್ ವಾರಂಟ್ ಜಾರಿಗೊಳಿಸಿದೆ.
ಕಾನೂನಿನ ಪ್ರಕಾರ, ಅಪರಾಧಿಗಳಿಗೆ ದೊರೆಯಬೇಕಾದ ಎಲ್ಲಾ ಕಾನೂನು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿದ ನಂತರ ಕೊನೆಯ ಹಂತವಾದ ಮರಣದಂಡನೆ ಪ್ರಕ್ರಿಯೆಗಾಗಿ ಕೋರ್ಟ್ ಬ್ಲ್ಯಾಕ್ ವಾರಂಟ್ (ಡೆತ್ ವಾರಂಟ್) ಹೊರಡಿಸುತ್ತದೆ.
ಈಗಾಗಲೇ ನಿರ್ಭಯಾ ಪ್ರಕರಣದ ಆರೋಪಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದು, ಜೈಲು ಅಧಿಕಾರಿಗಳು ಮರಣದಂಡನೆಗೆ ಅಂತಿಮ ಸಿದ್ದತೆ ಮಾಡಿಕೊಳ್ಳುತ್ತಿದ್ದು ನ್ಯಾಯಾಲಯದ ಆದೇಶಕ್ಕೆ ಕಾಯುತ್ತಿದ್ದರು. ಇನ್ನು ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಹೊಸ ವಧಾಸ್ಥಳವನ್ನು ನಿರ್ಮಿಸಲಾಗುತಿದ್ದು, ಜೈಲು ಸಂಖ್ಯೆ ಮೂರರಲ್ಲಿ ಈ ಈ ಮೊದಲು ವಧಾಸ್ಥಳ ಇತ್ತು, ಅದರ ಪಕ್ಕದಲ್ಲೇ ನೂತನ ವಧಾಸ್ಥಳವನ್ನು ನಿರ್ಮಿಸಲಾಗುತ್ತಿದೆ.
ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆ ತಿಹಾರ್ ಜೈಲು ಸಂಖ್ಯೆ 3ರಲ್ಲಿ ಹೊಸ ವಧಾಸ್ಥಳವನ್ನು ನಿರ್ಮಿಸುತ್ತಿದೆ. ಹಳೆಯ ವಧಾಸ್ಥಳದ ಕೇವಲ 10 ಅಡಿ ದೂರದಲ್ಲಿ ಈ ಹೊಸ ವಧಾಸ್ಥಳ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ದೆಹಲಿ ಸರ್ಕಾರ ಸುಮಾರು 25 ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದೆ.