ಬೆಂಗಳೂರು, ಜ.08 (Daijiworld News/PY) : ‘ಕೇಂದ್ರ ಸರಕಾರ ನೀಡಿರುವ 669.85 ಕೋಟಿ ರೂ.ಹೆಚ್ಚುವರಿ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರಕಾರ ನೀಡಿರುವ ನೆರೆ ಪರಿಹಾರದ ಬಗ್ಗೆ ಟ್ವೀಟ್ ಮಾಡಿದ ಸಿದ್ಧರಾಮಯ್ಯ ಅವರು, ಯಡಿಯೂರಪ್ಪ ಅವರ ಗೋಗರೆತಕ್ಕೆ ಕರಗಿದ ಪ್ರಧಾನಿ ನರೇಂದ್ರ ಮೋದಿ ರೂ.669.85 ಕೋಟಿ ಹೆಚ್ಚುವರಿ ನೆರೆಪರಿಹಾರ ದಯಪಾಲಿಸಿದ್ದು, ಒಟ್ಟು ಪರಿಹಾರ ರೂ.1869.85 ಆಗುತ್ತೆ, ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು ಪರಿಹಾರದ ಮೊತ್ತ 1200+1869.85=ರೂ.3069 ಕೋಟಿ ಎಂದು ಹೇಳಿ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ ಎಂದಿದ್ದಾರೆ.
ಯಡಿಯೂರಪ್ಪ ಅವರೇ, ನೆನಪಿರಲಿ ನೀವೇ ಒಪ್ಪಿಕೊಂಡಂತೆ ಅಂದಾಜು ನಷ್ಟ ರೂ. 50 ಸಾವಿರ ಕೋಟಿ, ನೀವು ಕೇಳಿದ್ದು ರೂ.38 ಸಾವಿರ ಕೋಟಿ. ನಿಮ್ಮ ಗೋಗರೆತಕ್ಕೆ ಸಿಕ್ಕಿದ್ದು ಕೇವಲ ರೂ.1869 ಕೋಟಿ. ಇಷ್ಟು ಸಾಕಾ ಎಂದು ಕೇಳಿದ್ದಾರೆ.
ಮುಖ್ಯಮಂತ್ರಿ ಅವರೇ, ನೀವು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದು ಆಗಸ್ಟ್ ತಿಂಗಳ ನೆರೆ ಹಾವಳಿಗೆ. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ನಷ್ಟದ ಸಮೀಕ್ಷೆಯೇ ಪೂರ್ಣಗೊಂಡಿಲ್ಲ. ತಕ್ಷಣ ಅದನ್ನು ಮುಗಿಸಿ ಕೇಂದ್ರಕ್ಕೆ ಹೆಚ್ಚುವರಿ ಪರಿಹಾರದ ಬೇಡಿಕೆ ಸಲ್ಲಿಸಿ ಎಂದು ಹೇಳಿದ್ದಾರೆ.
ಹಾಗೆಯೇ, ತಮ್ಮ ಪಕ್ಷದ ರಾಜಕೀಯ ಸಿದ್ಧಾಂತ ಒಪ್ಪದಿರುವವರು ಅಧ್ಯಕ್ಷರಾಗಿರುವ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿರುವ ಸಚಿವ ಸಿ.ಟಿ.ರವಿ ನಿರ್ಧಾರ ಕನ್ನಡ ನಾಡು-ನುಡಿಗೆ ಬಗೆದ ದ್ರೋಹವಾಗಿದೆ. ಕನ್ನಡ ಸಾಹಿತ್ಯ ಪರಿಷತ್ನ ಸ್ವಾಯತ್ತತೆಯನ್ನು ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದ್ದಾರೆ.