ಶಿವಮೊಗ್ಗ, ಜ.08 (Daijiworld News/PY) : "ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಯಾವುದೇ ಒಂದು ಸಮುದಾಯವನ್ನು ವೈಯಕ್ತಿಕವಾಗಿ ಗುರಿಯಾಗಿಟ್ಟುಕೊಂಡು ಮಾತನಾಡುವುದು ಸರಿಯಲ್ಲ" ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆ ನಡೆಯುತ್ತಿದೆ, ಈ ವಿಷಯದ ಬಗ್ಗೆ ಯಾವುದೇ ಒಂದು ಸಮುದಾಯವನ್ನು ವೈಯುಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡುವುದರಿಂದ ಪ್ರಜಾಪ್ರಭುತ್ವದ ಆರೋಗ್ಯ ಹಾಳಾಗುತ್ತದೆ" ಎಂದು ಹೇಳಿದರು.
"ಈಗಾಗಲೇ ಲೋಕಸಭಾ, ರಾಜ್ಯಸಭಾದಲ್ಲಿ ಪೌರತ್ವ ಕಾಯ್ದೆಗೆ ಅನುಮೋದನೆ ದೊರಕಿದ್ದು, ರಾಷ್ಟ್ರಪತಿ ಸಹಿ ಬಿದ್ದಿದೆ. ಪೌರತ್ವ ಕಾಯ್ದೆಯ ಬಗ್ಗೆ ಈಗ ವಿರೋಧ ಮಾಡುವುದು ಸರಿಯಲ್ಲ, ಭಾರತ್ ಬಂದ್ ಕೂಡಾ ಸಿಎಎ ಹಾಗೂ ಕೇಂದ್ರ ಸರ್ಕಾರದ ವಿರುದ್ದದ ಒಂದು ಪ್ರಯತ್ನವಾಗಿದೆ" ಎಂದರು.
"ಅನೇಕರು ಡಿಸಿಎಂ ಹುದ್ದೆ ಬಯಸಿದ್ದಾರೆ, ನಾನು ಯಾವುದೇ ಕಾರಣಕ್ಕೂ ಮತ್ತೆ ಡಿಸಿಎಂ ಆಗುವುದಿಲ್ಲ, ಈ ಮೊದಲೇ ನಾನು ಡಿಸಿಎಂ ಆಗಿದ್ದೆ" ಎಂದರು.
ಬಿಜೆಪಿಯಿಂದ ಕೆಲವು ಶಾಸಕರು ಹೊರಬರಲಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಈಶ್ವರಪ್ಪ, "ಕುಮಾರಸ್ವಾಮಿ ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ, ಏಕೆಂದರೆ, ನಮ್ಮ ಪಕ್ಷದಲ್ಲಿ ಈಗ ಶಾಸಕರ ಸಂಖ್ಯೆ ಹೆಚ್ಚಾಗಿದ್ದು ಓವರ್ಲೋಡ್ ಆಗಿದೆ, ನಮ್ಮ ಎಲ್ಲಾ ಶಾಸಕರು ಹುಲಿಗಳಿದ್ದಂತೆ. ಅವರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ" ಎಂದು ಹೇಳಿದರು.