ತುಮಕೂರು, ಜ.08 (Daijiworld News/PY) : "ಜೆಎನ್ಯು ದೇಶದ್ರೋಹಿಗಳು, ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದವರಿಂದ ತುಂಬಿದ್ದು, ರಾಷ್ಟ್ರ ವಿರೋಧಿಗಳನ್ನು ಸೃಷ್ಟಿಸುತ್ತಿದೆ" ಎಂದು ಆರ್ ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ರಾಷ್ಟ್ರೀಯ ನಾಗರಿಕ ವೇದಿಕೆ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, "ಜೆಎನ್ಯು ದೇಶ ದ್ರೋಹಿಗಳು, ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದವರಿಂದ ತುಂಬಿದ್ದು, ರಾಷ್ಟ್ರ ವಿರೋಧಿಗಳನ್ನು ಸೃಷ್ಟಿಸುತ್ತಿದೆ, ಇದರಿಂದಾಗಿ ವಿಶ್ವವಿದ್ಯಾಲಯವನ್ನು ಮುಚ್ಚಬೇಕಾಗಿಲ್ಲ, ವಿದ್ಯಾರ್ಥಿಗಳಲ್ಲಿ ಪ್ರೀತಿ, ವಿಶ್ವಾಸದಿಂದ ರಾಷ್ಟ್ರೀಯತೆಯನ್ನು ಮೂಡಿಸಬೇಕು, ಸತ್ಯ ಏನು ಎಂಬುದರ ಬಗ್ಗೆ ಅವರಿಗೆ ತಿಳಿಸಿಕೊಡಬೇಕು" ಎಂದು ತಿಳಿಸಿದರು.
ಬಳಿಕ ಸಿಎಎ ವಿಚಾರವಾಗಿ ಮಾತನಾಡಿದ ಅವರು, "ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ನಾಯಕರು ಸಿಎಎ ಕುರಿತ ವಿಚಾರವಾಗಿ ಜನರ ಹಾದಿ ತಪ್ಪಿಸುತ್ತಿದ್ದಾರೆ "ಎಂದರು.
ಮುಸ್ಲಿಂ ಸಮುದಾಯದ ಕುರಿತು ಮಾತನಾಡಿದ ಅವರು, "ನಮ್ಮ ದೇಶಕ್ಕೆ ಅತಿಥಿಗಳಾಗಿ ಬಂದವರು ಈಗ ಅತಿಥೇಯರಂತೆ ಮಾಡುತ್ತಿದ್ದಾರೆ. ಲಕ್ಷಾಂತರ ಮಸೀದಿಗಳನ್ನು ನಿರ್ಮಾಣ ಮಾಡಲು ಅವರಿಗೆ ಭೂಮಿ ನೀಡಿದ್ದು ಯಾರು, ಭಾರತಕ್ಕೆ ಬರುವ ಮೊದಲೇ ಅವರು ಜಮೀನು ಖರೀದಿಸಿದ್ದರೇ, ದೇಶ ವಿಭಜನೆಯ ಸಂದರ್ಭ ನಮ್ಮ ದೇಶದ ನಾಯಕರು ರಣಹೇಡಿಗಳಾಗಿದ್ದ ಕಾರಣ ದೇಶದ ನಾಗರೀಕರು ಇಂದು ಸಂಕಷ್ಟಪಡುವಂತಾಗಿದೆ" ಎಂದು ಹೇಳಿದರು.