ನವದೆಹಲಿ, ಜ.09 (Daijiworld News/PY) : ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ತಮಿಳುನಾಡಿನ ಪೊಲೀಸರು ಇತ್ತೀಚೆಗೆ ವಿಫಲಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮಿಳುನಾಡಿನ ಐವರನ್ನು ಹಾಗೂ ಬೆಂಗಳೂರಿನ ಮೂವರನ್ನು ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿದ್ದು, ಆರೋಪಿಗಳಿಂದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಬಂಧಿತ ಆರೋಪಿಗಳನ್ನು ಬೆಂಗಳೂರಿನ ಮೊಹಮ್ಮದ್ ಹನೀಫ್ ಖಾನ್ (29), ಇಮ್ರಾನ್ ಖಾನ್ (32) ಹಾಗೂ ಮೊಹಮ್ಮದ್ ಝೈದ್ (24) ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರು ತಿಳಿಸಿದ್ದಾರೆ. ಈ ಆರೋಪಿಗಳು ಜಿಹಾದಿ ದಾಳಿ ನಡೆಸಲು ಸಂಚು ರೂಪಿಸಿದ್ದು ಕರ್ನಾಟಕ ಪೊಲೀಸರು ಹಾಗೂ ಇತರ ಗುಪ್ತಚರ ಇಲಾಖೆ ಸಹಾಯದೊಂದಿಗೆ ತಮಿಳುನಾಡು ಕ್ಯೂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆಂದು ವರದಿ ತಿಳಿಸಿದೆ.
ಆರೋಪಿಗಳನ್ನು ಚೆನ್ನೈ ಕೋರ್ಟ್ ಗೆ ಹಾಜರುಪಡಿಸಿದ್ದು, ಎಂಟು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.
ಮೂಲಭೂತವಾದಿ ಜಿಹಾದಿಗಳು ದೇಶದ ವಿವಿಧ ಕಡೆಗಳಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದ ಬಗ್ಗೆ ತಮಿಳುನಾಡು ಗುಪ್ತಚರ ವಿಭಾಗ ಮಾಹಿತಿಯನ್ನು ಪಡೆದಿತ್ತು. ಈ ಮಾಹಿತಿ ಹಿನ್ನೆಲೆ ಕಾರ್ಯಾಚರಣೆ ನಡೆಸುವ ಮೂಲಕ ಎಂಟು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ವರದಿ ತಿಳಿಸಿದೆ.