ನವದೆಹಲಿ, ಜ.09 (Daijiworld News/PY) : 2012ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸದ್ದ ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಓರ್ವನಾದ ವಿನಯ್ ಕುಮಾರ್ ಗುರುವಾರ ಸುಪ್ರೀಂಕೋರ್ಟ್ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ ಎಂದು ವರದಿ ತಿಳಿಸಿದೆ.
ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣದ ಹಿನ್ನೆಲೆ ಜ.7ರಂದು ನಾಲ್ವರು ಅಪರಾಧಿಗಳಾದ ವಿನಯ್, ಪವನ್, ಅಕ್ಷಯ್ ಮತ್ತು ಮಖೇಶ್ ಸಿಂಗ್ಗೆ ಜ.22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಡೆತ್ ವಾರಂಟ್ ಹೊರಡಿಸಿದ್ದರು.
ಡೆತ್ ವಾರಂಟ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಕ್ಯುರೇಟಿವ್ ಅರ್ಜಿ ನೀಡಲು ಪಟಿಯಾಲಾ ಹೌಸ್ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ. ಅಲ್ಲದೇ ರಾಷ್ಟ್ರಪತಿ ಬಳಿ ಇನ್ನೊಮ್ಮೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಅಥವಾ ರಾಷ್ಟ್ರಪತಿಗಳು ಅರ್ಜಿ ಸ್ವೀಕರಿಸಿದೇ ಆದಲ್ಲಿ ಡೆತ್ ವಾರಂಟ್ಗೆ ತಡೆ ಸಿಗಲಿದೆ.
ಡೆತ್ ವಾರಂಟ್ ಜಾರಿಗೊಳಿಸಿದ 14 ದಿನದ ಬಳಿಕ ಶಿಕ್ಷೆ ಜಾರಿಯಾಗಲಿದೆ. ಕಾನೂನಿನ ಪ್ರಕಾರ ಶಿಕ್ಷೆ ಜಾರಿಗೊಳ್ಳುವ ಅವಧಿಯಲ್ಲಿ ಆರೋಪಿಗಳು ತಮ್ಮ ಕೊನೆಯ ಕಾನೂನಿನ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.